ಕುಮಾರಧಾರಾ ದಡದಲ್ಲಿ ಗಹಗಹಿಸಿ ನಕ್ಕ ಮಕರ

ಉಪ್ಪಿನಂಗಡಿ: ಕುಮಾರಧಾರಾ ನದಿಯ 34 ನೆಕ್ಕಿಲಾಡಿ ಸಮೀಪ ದಡದಲ್ಲಿ ಬೃಹತ್‌ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ತನ್ನನ್ನು ನೋಡಲು ಜನ ಜಮಾಯಿಸುತ್ತಿದ್ದಂತೆ ಬಾಯ್ತೆರೆದು ಹಲ್ಲು ಕಿರಿದು ಆಕ್ರಮಣಕಾರಿ ವರ್ತನೆ ತೋರಿ ನದಿಯಲ್ಲಿ ಪಲಾಯನ ಮಾಡಿದೆ. ಈ ಹಿನ್ನೆಲೆಯಲ್ಲಿ ಕುಮಾರಧಾರ ನದಿ ತಟದಲ್ಲಿ ಸಂಚರಿಸುವವರು ಎಚ್ಚರಿಕೆಯಲ್ಲಿರುವಂತೆ ಸೂಚಿಸಲಾಗಿದೆ.

ಬುಧವಾರ ಸಾಯಂಕಾಲ ಇಲ್ಲಿನ ಶೇಖಬ್ಬ ಹಾಜಿ ಎಂಬವರ ಮನೆ ಬಳಿ ಕುಮಾರಧಾರಾ ನದಿ ದಡದಲ್ಲಿ ಮೊಸಳೆಯೊಂದು ವಿಶ್ರಾಂತಿ ಪಡೆಯುವುದನ್ನು ಮಕ್ಕಳು ದೂರದಿಂದ ಕಂಡಿದ್ದರು. ಕುತೂಹಲದಿಂದ ಸ್ಥಳೀಯರು ಹತ್ತಿರಕ್ಕೆ ಹೋದಾಗ ಮೊಸಳೆಯು ಬಾಯಿ ಅಗಲಿಸಿ ಆಕ್ರಮಣಕಾರಿಯಾಗಿ ವರ್ತಿಸಿ ಮತ್ತೆ ನದಿ ನೀರಿಗೆ ಇಳಿದು ಕಣ್ಮರೆಯಾಗಿದೆ.

ಎರಡು ವರ್ಷಗಳ ಹಿಂದೆ ಪಂಜಳದ ನೇತ್ರಾವತಿ ನದಿಯಲ್ಲಿಯೂ ದೊಡ್ಡ ಮೊಸಳೆಗಳೆರಡು ಪ್ರತ್ಯಕ್ಷವಾಗಿದ್ದವು. ಕಳೆದ ವರ್ಷ ಇಲ್ಲಿನ ನೇತ್ರಾವತಿ ನದಿ ದಡದಲ್ಲಿ ದೊಡ್ಡ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿತ್ತು. ಮೊಸಳೆ ಇರುವ ಕಾರಣ ನದಿಗೆ ಮೀನು ಬೇಟೆಗೆಂದು ಹೋಗುವವರಲ್ಲಿ ಆತಂಕ ಮೂಡಿಸಿದೆ. ಕೆಲವು ದಿನಗಳ ಹಿಂದೆ ನದಿಯಲ್ಲಿ ನೀರು ಕಡಿಮೆ ಇದ್ದಾಗ ನೇತ್ರಾವತಿ ನದಿಯಲ್ಲಿ ಕಡವಿನ ಬಾಗಿಲ ಸಮೀಪ ಸುಮಾರು 10ರಷ್ಟಿದ್ದ ನೀರು ನಾಯಿ ಗಳ ಹಿಂಡು ಕಾಣಿಸಿಕೊಂಡಿತ್ತು ಎಂದು ಉಪ್ಪಿನಂಗಡಿಯ ಪ್ರವಾಹ ರಕ್ಷಣ ತಂಡದ ಗೃಹ ರಕ್ಷಕದಳದ ದಿನೇಶ್‌ ಬಿ. ತಿಳಿಸಿದ್ದಾರೆ.

ನೀರ್‌ನಾಯಿಯೂ ಇದೆ:
ಎರಡು ವರ್ಷಗಳ ಹಿಂದೆ ನದಿಗೆ ಮೀನಿನ ಮರಿಗಳನ್ನು ಹಾಕಲಾಗಿದ್ದು, ಅವುಗಳು ಈಗ ಬೆಳೆದು ದೊಡ್ಡದಾಗಿವೆ. ಮೀನು ಹೇರಳವಾಗಿರುವ ಕಾರಣ ಇದೀಗ ನೀರು ನಾಯಿಗಳು ಅದರ ಬೇಟೆಗಾಗಿ ನದಿಗಳಲ್ಲಿ ಕಾಣಿಸಿಕೊಳ್ಳುತ್ತಿವೆ ಎನ್ನಲಾಗುತ್ತಿದೆ.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj

error: Content is protected !!