ಮಂಗಳೂರು: ವ್ಯಕ್ತಿಯೊಬ್ಬರಿಗೆ ತಮ್ಮ ತಾಯಿಯ ಹೆಸರಲ್ಲಿರುವ ಜಾಗದ ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಮಾಡಿಸಲು ಹೆಚ್ಚುವರಿ ಲಂಚದ ಬೇಡಿಕೆ ಇರಿಸಿದ ಮಂಗಳೂರಿನ ಸರ್ವೆಯರ್ ಹಾಗೂ ಮಧ್ಯವರ್ತಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.\
ಸರ್ವೆಯರ್ ನಂದೀಶ್ ಹಾಗೂ ಮಧ್ಯವರ್ತಿ ದಿವಾಕರ್ ಬಿಜೈ ಬಂಧಿತರು.
ದೂರುದಾರರು ಪ್ರಾಪರ್ಟಿ ಕಾರ್ಡ್ ಮಾಡಿಸಲು ಕಳೆದ ಫೆಬ್ರವರಿಯಲ್ಲಿ ಮಂಗಳೂರು ಯುಪಿಓಆರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅವರ ತಾಯಿಗೆ ವಯಸ್ಸಾಗಿರುವುದರಿಂದ ಮಂಗಳೂರು ಯುಪಿಓಆರ್ ಕಚೇರಿಗೆ ಹೋಗಿ ಕಡತದ ಬಗ್ಗೆ ವಿಚಾರಿಸಿದ್ದರು. ಸರ್ವೆಯರ್ ನಂದೀಶ್ ಅವರು ಏಪ್ರಿಲ್‌ನಲ್ಲಿ ಸರ್ವೆ ನಡೆಸಿ ನಂತರ 6500 ರೂ. ಲಂಚದ ಹಣವನ್ನು ತಾನು ಸ್ವೀಕರಿಸಿದ್ದ ಹಾಗೂ 20,000ರೂ. ಲಂಚದ ಹಣವನ್ನು ಮಧ್ಯವರ್ತಿ ದಿವಾಕರ್ ಮೂಲಕ ಪಡೆದುಕೊಂಡಿದ್ದ.
ಆನಂತರ ಸರ್ವೆಯರ್ ನಂದೀಶ್ ಬಜಾಲ್ ಮತ್ತು ಕಂಕನಾಡಿ ಗ್ರಾಮದ ಎರಡೂ ಸ್ಥಳಗಳ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ನೀಡಲು ಹೆಚ್ಚುವರಿಯಾಗಿ 18,000 ರೂ. ಲಂಚದ ಹಣವನ್ನು ನೀಡುವಂತೆ ಒತ್ತಾಯಿಸಿದ್ದ. ಈ ಬಗ್ಗೆ ನೊಂದವರು ಸಾಕ್ಷಿಗಳೊಂದಿಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ನಂದೀಶ್ ಮತ್ತು ದಿವಾಕರ್ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.
ಹೆಚ್ಚುವರಿ ಲಂಚವಾಗಿ 15 ಸಾವಿರ ರೂ. ಮೊತ್ತವನ್ನು ದೂರುದಾರರಿಂದ ಈಚೆಗೆ ನಂದೀಶ್ ದಿವಾಕರನ ಮೂಲಕ ಪಡೆದುಕೊಂಡಿದ್ದ. ಬುಧವಾರ ಮತ್ತೆ ಹೆಚ್ಚುವರಿಯಾಗಿ 2000 ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ತಂಡದ ಬಲೆಗೆ ಬಿದ್ದಿದ್ದಾನೆ. ಆರೋಪಿ ನಂದೀಶ್ ಅರ್ಜಿದಾರರಿಂದ ಇಲ್ಲಿಯವರೆಗೆ ಒಟ್ಟು 43,500 ರೂ. ಲಂಚದ ಹಣವನ್ನು ಪಡೆದುಕೊಂಡಿದ್ದಾನೆ.
ಕಾರ್ಯಾಚರಣೆಯಲ್ಲಿ ಪ್ರಭಾರ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನ ನೀಡಿದ್ದು ಲೋಕಾಯುಕ್ತ ಡಿವೈಎಸ್‌ಪಿ ಡಾ|ಗಾನ ಪಿ ಕುಮಾರ್, ಸುರೇಶ್ ಕುಮಾರ್.ಪಿ, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ ಹಾಗೂ ಸಿಬಂದಿಗಳು ಭಾಗವಹಿಸಿದ್ದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj