ಭಾರೀ ಮಳೆಗೆ ಮುಳುಗಿದ ಸ್ಪೀಕರ್‌ ಖಾದರ್‌ ಕ್ಷೇತ್ರ: ತೇಲಿ ಬಂದ ಕಾರುಗಳು, ದೋಣಿಯಲ್ಲೇ ಸಂಚಾರ!

ಉಳ್ಳಾಲ: ಮುಂಗಾರು ಪೂರ್ವ ರಾಕ್ಷಸ ಮಳೆಗೆ ಸ್ಪೀಕರ್‌ ಯು.ಟಿ. ಖಾದರ್‌ ಸ್ವಕ್ಷೇತ್ರ ಉಳ್ಳಾಲದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಉಳ್ಳಾಲದ ಉಳ್ಳಾಲಬೈಲ್‌ ಎಂಬ ಪ್ರದೇಶ ಸಂಪೂರ್ಣ ಜಲಾವೃತವಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ರಸ್ತೆಯೆಲ್ಲಾ ಕಣ್ಮರೆಯಾಗಿದ್ದು, ಆ ಜಾಗದಲ್ಲಿ ನೆರೆನೀರು ಆವರಿಸಿದೆ. ವಾಹನಗಳು ಓಡಾಡುತ್ತಿದ್ದ ಸ್ಥಳದಲ್ಲಿ ದೋಣಿ ಸಂಚಾರ ಆರಂಭವಾಗಿದ್ದು, ಜನರನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತಿದೆ. ನೆರೆ ನೀರಿಗೆ ಥಾರ್‌, ಕಾರಿನಂತಹಾ ವಾಹನಗಳು ಮಕ್ಕಳ ಆಟಿಕೆಗಳಂತೆ ತೇಲಿಕೊಂಡು ಹೋಗಿದ್ದು, ಜಖಂ ಆಗಿದೆ. ಮನೆಯೊಳಗಡೆ ಸೊಂಟ ಮುಟ್ಟ ನೀರು ನಿಂತಿದ್ದು, ವಾಸಿಸಲು ಸಾಧ್ಯವಿಲ್ಲದಂತ ಪರಿಸ್ಥಿತಿ ಉಂಟಾಗಿದೆ. ಮನೆ ಮುಂದೆ ನಿಂತಿದ್ದ ವಾಹನಗಳು ನೀರಿನಲ್ಲಿ ಮುಳುಗಡೆ ಯಾಗಿದ್ದು, ಕೆಟ್ಟುಹೋಗಿದೆ. ಮನೆಯ ಒಳಗಡೆ ಪೇರಿಸಿಟ್ಟಿದ್ದ ಅಡಿಕೆ, ತೆಂಗಿನಕಾಯಿ, ಅಕ್ಕಿ, ಭತ್ತ ಇತ್ಯಾದಿ ಬೆಳೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಕೋಟ್ಯಂತರ ರೂ. ನಷ್ಟ ಸಂಭವಿಸಿದೆ.

ಸ್ಥಳಕ್ಕೆ ನಗರ ಸಭೆ ಅಧಿಕಾರಿಗಳು ಭೇಟಿ ನೀಡುತ್ತಿದ್ದಂತೆ ಅವರಿಗೆ ಊರಿನ ಜನರು ಮಂಗಳಾರತಿ ಎತ್ತಿದ್ದಾರೆ. ಅವೈಜ್ಞಾನಿಕ ರಸ್ತೆ ನಿರ್ಮಾಣ, ತೋಡುಗಳನ್ನು ನಾಶ ಮಾಡಿದ್ದು, ನೀರು ಹೋಗುವ ಜಾಗದಲ್ಲಿ ಮನೆ ನಿರ್ಮಿಸಿದ್ದೇ ಉಳ್ಳಾಲಬೈಲು ನೀರುಮಯ ಆಗಲು ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಉಳ್ಳಾಲ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌ ಸ್ವಕ್ಷೇತ್ರವಾಗಿದ್ದು, ಮುಂಗಾರು ಪೂರ್ವ ಮಳೆಗೇ ತತ್ತರಿಸಿದೆ. ಮಳೆರಾಯ ಎಂಟ್ರಿ ಕೊಟ್ಟು ಮೂರ್ನಾಲ್ಕು ದಿನ ಆಗುವ ಮುನ್ನವೇ ಉಳ್ಳಾಲದ ಅಭಿವೃದ್ಧಿಯ ನಗ್ನದರ್ಶನವಾಗಿದ್ದು, ಇನ್ನು ಮುಂದಿನ ಮೂರು ತಿಂಗಳ ಮಳೆಗೆ ಉಳ್ಳಾದಲ್ಲಿ ಏನು ಸಂಭವಿಸಬಹುದೋ ಎಂದು ಜನರು ಆತಂಕದಿಂದ ಕಾಲ ಕಳೆಯುತ್ತಿದ್ದಾರೆ.

error: Content is protected !!