ಮಂಗಳೂರು: ಖ್ಯಾತ ರಂಗಕರ್ಮಿ, ತುಳು ನಾಟಕ ಕಲಾವಿದ, ಸಿನಿಮಾ ಹಾಗೂ ಕಿರುತೆರೆ ಕಲಾವಿದ ನವೀನ್ ಡಿ. ಪಡೀಲ್ ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ʻಪ್ರೆಸ್ ಕ್ಲಬ್ ಗೌರವ ಅತಿಥಿʼಯಾಗಿ ಸನ್ಮಾನ ಸ್ವೀಕರಿಸಿ ಪತ್ರಕರ್ತರೊಂದಿಗೆ ಆಪ್ತ ಸಂವಾದ ನಡೆಸಿದರು.
ತಾವು ಬೆಳೆದು ಬಂದ ಹಾದಿಯ ಬಗ್ಗೆ ಆಪ್ತವಾಗಿ ಮಾತಾಡಿದ ಪಡೀಲ್, ಒಂದು ಗಂಟೆಯ ಕಾಲ ಪತ್ರಕರ್ತರೊಂದಿಗೆ ಮನ ಬಿಚ್ಚಿ ಮಾತನಾಡಿ, ಎಲ್ಲಾ ನೋವನ್ನು ಡಿಲೀಟ್ ಮಾಡಿ ಹೊಸತನದಿಂದ ಬದುಕುತಿದ್ದೇನೆ ಎಂದು ನುಡಿದರು. ಈ ಸಂದರ್ಭದಲ್ಲಿ ʻಕರಿಹೈದ ಕೊರಗಜ್ಜʼ ಚಿತ್ರದಲ್ಲಿ ತನಗಾದ ನೋವಿನ ಘಟನೆಯನ್ನು ನೆನಪಿಸಿಕೊಂಡರು.
ʻಕರಿಹೈದ ಕೊರಗಜ್ಜʼ ಚಿತ್ರದಲ್ಲಿ ನಾನು ನಟಿಸಿದಾಗ ನನ್ನ ಕಾಲು ಫ್ರಾಕ್ಚರ್ ಆಗಿತ್ತು. ಇದರ ಚಿಕಿತ್ಸೆಗಾಗಿ ಮೂರು ಲಕ್ಷ ಖರ್ಚಾಗಿದೆ. ಆದರೆ ಚಿತ್ರ ತಂಡ ಕೇವಲ 1.25 ಲಕ್ಷ ಮಾತ್ರ ಕೊಟ್ಟಿದೆ. ಶೂಟಿಂಗ್ ಸಮಯದಲ್ಲಿ ಕಲಾವಿದರಿಗೆ ಅನಾಹುತ ಆದರೆ ಅದರ ಸಂಪೂರ್ಣ ಖರ್ಚುವೆಚ್ಚಗಳನ್ನು ಸಿನಿಮಾ ತಂಡವೇ ನೋಡಬೇಕು ಎಂಬ ನಿಯಮವಿದೆ. ಆದರೆ ನನ್ನಲ್ಲಿ ನೀನು ಹೇಗಿದ್ದೀ ಎಂದೂ ಕೇಳಿಲ್ಲ. ಚಿತ್ರ ಕಲಾವಿದರು, ನಿರ್ಮಾಕರು ನನ್ನ ಮನೆವರೆಗೆ ಬಂದರೂ ನನ್ನತ್ತ ಕಣ್ಣೆತ್ತಿಯೂ ನೋಡಲಿಲ್ಲ. ಫಿಲ್ಮ್ ಚೇಂಬರ್ ಅಧ್ಯಕ್ಷರಲ್ಲಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಲಿಗಾದ ಗಾಯದಿಂದಾಗಿ ನಾನು ಮೂರು ತಿಂಗಳು ಕೆಲಸವಿಲ್ಲದೆ ಖಾಲಿ ಉಳಿಯಬೇಕಾಯಿತು. ಈಗಲೂ ನೋವಾಗುತ್ತಿದೆ. ನನಗೆ ಹಿಂದಿನಂತೆ ನಡೆಯಲಾಗುವುದಿಲ್ಲ. ಆಪರೇಷನ್ ನಡೆಸುವಂತೆ ವೈದ್ಯರು ಸೂಚಿಸಿದ್ದಾರೆ. ʻಕರಿಹೈದ ಕೊರಗಜ್ಜʼ ಬಿಗ್ ಬಜೆಟ್ ಸಿನಿಮಾ ಆಗಿದ್ದರೂ ನನಗಾಗಿ ಸ್ವಲ್ಪ ಹಣ ಖರ್ಚು ಮಾಡಲು ಅವರು ತಯಾರಿಲ್ಲ ಎಂದಾಗ ತುಂಬಾ ಬೇಜಾರಾಗಿದೆ. ಇದನ್ನೆಲ್ಲಾ ನಾನು ಕೊರಗಜ್ಜನ ಕೋಲ ಹರಕೆ ಕೊಟ್ಟು ಎಲ್ಲವನ್ನೂ ಅವನ ಮುಂದಿಟ್ಟಿದ್ದೇನೆ. ನನಗೆ ಚಿತ್ರದ ಮೇಲೆ ವಿರೋಧವಿಲ್ಲ. ಚಿತ್ರ ಚೆನ್ನಾಗಿ ಮೂಡಿ ಬರಲಿ ಎನ್ನುವುದೇ ನನ್ನ ಹಾರೈಕೆʼ ಎಂದು ನವೀಡ್ ಡಿ ಪಡೀಲ್ ಹೇಳಿದ್ದಾರೆ.
ಸಾಂತಾಕ್ಲಾಸ್ ಮೂಲಕ ಬಣ್ಣ ಹಚ್ಚಿದೆ!
ನನ್ನ ನೆರೆಹೊರೆಯವರಲ್ಲಿ ಎಲ್ಲಾ ಜಾತಿ ಧರ್ಮದ ಜನರಿದ್ದು, ಅವರೊಂದಿಗೆ ಬೆಳೆದು ಬಂದವನು. ನೆರೆಹೊರೆಯವಲ್ಲಿ ಮುತ್ಸದ್ಧಿಗಳಿದ್ದ ಕಾರಣ ಸಾಮಾನ್ಯ ಜ್ಞಾನ ಬೆಳೆಸಿಕೊಂಡೆ. ಆರಂಭದಲ್ಲಿ ಕ್ರಿಸ್ಮಸ್ ಸಂದರ್ಭ ಸಾಂತಾಕ್ಲಾಸ್ ಮೂಲಕ ಬಣ್ಣ ಹಚ್ಚಲು ಆರಂಭಿಸಿದ ನಾನು ಕಲಾವಿದ ಗೈರಾಗಿದ್ದ ಸಂದರ್ಭ ಅನಿವಾಯರ್ಯವಾಗಿ ಕೃಷ್ಣಪ್ಪನ ಪಾತ್ರ ಮಾಡಿದೆ. ಇದರಿಂದ ನಾನು ಪ್ರಚಾರಕ್ಕೆ ಬಂದು ಹೆಸರು ಬಂದಿತು. ನಾಟಕ ಮಾಡಬಲ್ಲೆ ಎಂಬ ಧೈರ್ಯ ಬಂದಿತು. ಗಂಟೆ ಏತಾಂಡ್, ಬಲೇ ಚಾಪರ್ಕ ನಂತಹ ಕಮೆರ್ಷಿಯಲ್ ನಾಟಕದಲ್ಲಿ ಭಾಗವಹಿಸಿದೆ. ಬಾಬು, ಬುಲ್ಲೆ ನಂತಹಾ ಪಾತ್ರ ಮಾಡಿದೆ. ನಾನೊರಿ ಬರೊಲ್ಯಾ, ನಿಕುಲ್ ಮಾತಾ ಉಲ್ಲರತ್ತಾ ಮುಂತಾದ ನಾಟಕಗಳು ರಂಗಭೂಮಿಯಲ್ಲಿ ನನಗೆ ಹೆಸರು ತಂದು ಕೊಟ್ಟಿತು. ಹಿಂದೆ ನಾಕಟಗಳು ವಿಡಿಯೋ ರೆಕಾರ್ಡ್ ಆಗುತ್ತಿರಲಿಲ್ಲ. ರೀಲಿನ ಮೂಲಕ ಕ್ಯಾಸೆಟ್ ಮಾಡಲಾಗುತಿತ್ತು. ಆದರೆ ನನ್ನ ಆರಂಭದ ನಾಟಕಗಳು ರೆಕಾರ್ಡ್ ಆಗಿರಲಿಲ್ಲ. ಅಂದಿನ ನಾಟಕಕ್ಕೂ ಇಂದಿನ ನಾಟಕಕ್ಕೂ ತುಂಬಾ ವಿಶೇಷವಾಗಿದೆ, ಹಲವು ರೀತಿಯಲ್ಲಿ ಬದಲಾಗಿದೆ. ಸೋಷಿಯಲ್ ಮೀಡಿಯಾ ಗಟ್ಟಿಯಾದ ಮೇಲೆ ನಾಟಕ, ಸಿನಿಮಾ ಎಲ್ಲವೂ ಬದಲಾಗಿದೆ. ಜನರ ಮನಸ್ಥಿತಿಯೂ ಬದಲಾಗಿದೆ ಎಂದರು.
ಹಾಸ್ಯ ಬಿಟ್ಟು ಬಿಟ್ಟೆ!
ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡ ನಾನು ಇದೀಗ ಹಾಸ್ಯ ಚಿತ್ರಗಳಲ್ಲಿ ಕಡಿಮೆ ನಟಿಸುತ್ತಿದ್ದೇನೆ. ಯಾಕೆಂದರೆ ನನಗಿಂತ ಅದ್ಭುತ ಕಲಾವಿದರು ಈಗ ಬಂದಿದ್ದಾರೆ. ಅವರನ್ನು ನೋಡುವಾಗಲೇ ನಗು ಬರುತ್ತದೆ. ಆದರೆ ನನ್ನನ್ನು ಹಾಸ್ಯಕ್ಕೆ ಕರೆದೊಯ್ಯಲು ತುಂಬಾ ಹೊತ್ತಾಗುತ್ತದೆ. ಅದಕ್ಕಾಗಿ ಇಂದು ನಾನು ಗಂಭೀರ ಪಾತ್ರಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ಯಾವ ಪಾತ್ರ ಮಾಡಲೂ ರೆಡಿ ಇದ್ದೇನೆ. ಯಾವುದನ್ನೂ ನಿಭಾಯಿಸಬಲ್ಲೆ. ಆದರೆ ʻಇಂಬುʼ ಚಿತ್ರದಲ್ಲಿ ನನ್ನ ಪಾತ್ರವನ್ನು ದೊಡ್ಡ ಕಲಾವಿದರು ಮೆಚ್ಚಿದ್ದಾರೆ. ಆದರೆ ಸಾಮಾನ್ಯ ಜನರು ಯಾವ ಪ್ರತಿಕ್ರಿಯೆಯನ್ನೂ ಕೊಟ್ಟಿಲ್ಲ. ಜನರು ತನ್ನ ಅಭಿರುಚಿಗೆ ತಕ್ಕಂತೆ ಪಾತ್ರಗಳನ್ನು ಇಷ್ಟಪಡುತ್ತಾರೆ ಎಂದರು. ನಾಟಕ, ಚಿತ್ರಗಳಲ್ಲಿ ದೈವವನ್ನು ಅವಮಾನಿಸಬಾರದು. ಆದರೆ ಅವುಗಳನ್ನು ಸುಗಿಸಿ, ಅವುಗಳ ಮಹಿಮೆಯನ್ನು ಹೊಗಳಿ ಮಾಡಿದರೆ ಅವಮಾನ ಆಗುವುದಿಲ್ಲ. ಕಾಂತಾರ ಸಿನಿಮಾದಲ್ಲಿ ದೈವ ದೇವರನ್ನು ಅವಮಾನಿಸಲಾಗಿಲ್ಲ. ಟ್ರೋಲರ್ಸ್‌ಗಳಿಂದಾಗಿ ಅವಮಾನಿಸಲಾಗಿದೆ ಎಂದರು.
ಮಜಾಭಾರತದಲ್ಲಿ ಡಬಲ್ ಮೀನಿಂಗ್ ಜಾಸ್ತಿ ಆಯಿತು!
ನಾವು ಮಜಾ ಭಾರತದ ಎಪಿಸೋಡ್ ನಡೆಸುತ್ತಿದ್ದಾಗ ಯಾವುದೇ ಡಬಲ್ ಮೀನಿಂಗ್ ಮಾತಾಡುತ್ತಿರಲಿಲ್ಲ. ಆದರೂ ಕಾರ್ಯಕ್ರಮಕ್ಕೆ ಉತ್ತಮ ಟಿಆರ್‌ಪಿ ಇತ್ತು. ಆದರೆ ಈ ಬಾರಿ ಕೆಲವು ಕಲಾವಿದರು ಇದರಲ್ಲಿ ಡಬಲ್ ಮೀನಿಂಗ್ ಆಡಲಾರಂಭಿಸಿದ್ದರು. ಇದರಿಂದ ಅದರ ಟಿಆರ್‌ಪಿ ಕಡಿಮೆಯಾಗಿ ಅರ್ಧದಲ್ಲಿಯೇ ನಿಲ್ಲುವಂತಾಯಿತು. ಜನರ ಅಭಿರುಚಿಗೆ ತಕ್ಕಂತೆ ಕಾರ್ಯಕ್ರಮ ನಡೆಸಬೇಕು, ಈ ರೀತಿ ಮಾಡಿದರೆ ಜನರು ಇಷ್ಟಪಡುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ ಎಂದರು.
ಫ್ರೀ ಶೋ ನೋಡುವವರಿಂದಲೇ ಸಮಸ್ಯೆ:
ಸಿನಿಮಾವನ್ನು ಆರಂಭದಲ್ಲಿಯೇ ನೋಡಿದರೆ ನಿರ್ಮಾಪಕರಿಗೆ ಹೂಡಿದ ಹಣ ವಾಪಸ್ ಬರುತ್ತದೆ. ಎರಡುವಾರಗಳ ಬಳಿಕ ನೋಡಿದರೆ ಅದರ ಲಾಭ ಸಿನಿ ಟಾಕೀಸ್‌ಗಳಿಗೆ ಹೋಗುತ್ತದೆ. ನಮ್ಮಲ್ಲಿ ಸಿನಿಮಾದ ರಿವ್ಯೂ ನೋಡಿ ಹೋಗುವವರೇ ಹೆಚ್ಚು. ಆದರೆ ಪ್ರೀಮಿಯರ್ ಶೋ ನೋಡಿದವರೇ ಸಿನಿಮಾದ ಬಗ್ಗೆ ಬ್ಯಾಡ್ ರಿವ್ಯೂ ಕೊಡುವುದರಿಂದ ಸಿನಿಮಾ ಇಂದು ನೆಲಕಚ್ಚುತ್ತದೆ ಎಂದು ಆರೋಪಿಸಿದರು.
ಇಂದು ತುಳು ಸಿನಿಮಾ ರಂಗ ತಂಬಾ ಬೆಳೆದಿದೆ. ಜನರ ಅಭಿರುಚಿಯೂ ಬದಲಾಗಿದೆ. ದೊಡ್ಡ ದೊಡ್ಡ ಕಲಾವಿದರು, ತಂತ್ರಜ್ಞರು ಹುಟ್ಟಿಕೊಂಡಿದ್ದಾರೆ. ಬದಲಾವಣೆಯ ಗಾಳಿ ಬೀಸುತ್ತಿದ್ದು, ಇದಕ್ಕಾಗಿ ನಾವು ಹೊಂದಿಕೊಳ್ಳಬೇಕು. ಆ ರೀತಿ ಆದರೆ ತುಳುಚಿತ್ರ ರಂಗ ಬೆಳೆಯುತ್ತಿದೆ ಎಂದು ನುಡಿದರು.
ಕೋಮು ಸೌಹಾರ್ದತೆಯ ಬಗ್ಗೆ ನವೀನಣ್ಣನ ಪಾಠ
ಮಾತು ಮಾತತಿನಲ್ಲೂ ನವೀನ್ ಡಿ ಪಡೀಲ್ ಕೋಮು ಸೌಹಾರ್ದೆಯ ಬಗ್ಗೆ ಒತ್ತಿ ಒತ್ತಿ ಮಾತಾಡಿದರು. ಚುನಾವಣೆ ಎನ್ನುವುದು ಅದು ಬಂದಾಗ ಮಾತ್ರ. ಐದು ನಿಮಿಷ ಓಟು ಹಾಕಿ ಬರುವ ನಾವು ಅದಕ್ಕಾಗಿ ನಾವ್ಯಾಕೆ ಜಗಳ ಮಾಡಬೇಕು? ಇದರಿಂದ ಯಾರಿಗೆ ಲಾಭವಿದೆ? ನಾವು ಒಗ್ಗಟ್ಟಾಗಿದ್ದರೆ ಮಾತ್ರ ನಮಗೆ ಲಾಭವಿದೆ. ಎಲ್ಲರೂ ಸೌಹಾರ್ದತೆಯಿಂದ ಬದುಕಿ ತೋರಿಸಬೇಕು ಎಂದು ನುಡಿದರು.
ಹಿರಿಯ ಪತ್ರಕರ್ತ, ಪತ್ರಕರ್ತರ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಜಗನ್ನಾಥ ಶೆಟ್ಟಿ ಬಾಳರು, ನವೀನ್ ಡಿ ಪಡೀಲರ ಆರಂಭದ ದಿನಗಳ ಬಗ್ಗೆ ಮಾತನಾಡಿದರು. ಪ್ರೆಸ್ ಕ್ಲಬ್ ಪಿಬಿ ಹರೀಶ್ ರೈ ಸ್ವಾಗತಿಸಿದರು. ಜಿತೇಂದ್ರ ಕುಂದೇಶ್ವರ ಪ್ರಾಸ್ತಾವಿಕ ಮಾತನಾಡಿದರು. ಪುಷ್ಪರಾಜ್ ಶೆಟ್ಟಿ ಬಿಎನ್ ಧನ್ಯವಾದಗೈದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಹಿರಿಯ ಪತ್ರಕರ್ತರಾದ ಅಣ್ಣು ಮಂಗಳೂರು, ಇಬ್ರಾಹಿಂ ಅಡ್ಕಸ್ಥಳ, ರಾಮಕೃಷ್ಣ ಉಪಸ್ಥಿತರಿದ್ದರು.