ತಿರುವನಂತಪುರಂ: ಕೇರಳ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಹಡಗುಗಳಿಂದ ಅಪಾಯಕಾರಿ ವಸ್ತುಗಳು ಸೋರಿಕೆಯಾಗುವ ಸಾಧ್ಯತೆ ಇದೆ ಎಂದು ಕೋಸ್ಟ್ ಗಾರ್ಡ್ ವರದಿ ಮಾಡಿದ ನಂತರ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಸಮುದ್ರ ಬದಿಯಲ್ಲಿನ ಸಿಗುವ ಯಾವುದೇ ವಸ್ತುಗಳನ್ನೂ ಮುಟ್ಟದಂತೆ ಎಚ್ಚರಿಕೆ ನೀಡಲಾಗಿದೆ.

ಸಮುದ್ರದ ನೀರಿನ ಮೇಲೆ ಕಂಟೇನರ್‌ಗಳು ತೇಲುತ್ತಿರುವ ದೃಶ್ಯಗಳು ಕಂಡುಬಂದಿದ್ದು, ಇದರಲ್ಲಿ ವಿಷಕಾರಿ ವಸ್ತುಗಳಿರುವ ಸಾಧ್ಯತೆ ಇದ್ದು, ಇದನ್ನು ಮುಟ್ಟಿದರೆ ದೇಹಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದೀಗ ಕೇರಳಕ್ಕೆ ಮುಂಗಾರು ಪ್ರವೇಶಿಸಿದ್ದು, ಸಮುದ್ರ ಪ್ರಕ್ಷುಬ್ಧಗೊಂಡಿದೆ. ಸಮುದ್ರ ಅಲೆಗಳು ತನ್ನ ಒಡಲಲ್ಲಿರುವ ವಸ್ತುಗಳನ್ನು ದಡಕ್ಕೆ ಸಾಗಿಸುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ. ಹಾಗಾಗಿ ಯಾವುದೇ ಸಂದರ್ಭದಲ್ಲೂ ಜನರು ಅಂತಹ ವಸ್ತುಗಳನ್ನು ಕುತೂಹಲಕ್ಕೆ ಮುಟ್ಟಲು ಅಥವಾ ಅಥವಾ ಅನ್ವೇಷಿಸಲು ಪ್ರಯತ್ನಿಸಬಾರದು ಎಂದು ಕೆಎಸ್‌ಡಿಎಂಎ ಎಚ್ಚರಿಸಿದೆ. ಸಮುದ್ರದಲ್ಲಿ ಕಾಣಿಸಿರುವ ವಸ್ತುಗಳ ಬಗ್ಗೆ ಕೋಸ್ಟ್ ಗಾರ್ಡ್ ನಿಗಾ ವಹಿಸಿದ್ದು, ಇದರ ದೃಢೀಕರಣಕ್ಕಾಗಿ ಕೆಎಸ್‌ಡಿಎಂಎ ಕಾಯುತ್ತಿದೆ. ಕಂಟೇನರ್‌ಗಳು ಸಾಗರ ಅನಿಲ ತೈಲ ಮತ್ತು ಅತಿ ಕಡಿಮೆ ಸಲ್ಫರ್ ಇಂಧನ ತೈಲವನ್ನು (ವಿಎಲ್‌ಎಸ್‌ಎಫ್‌ಒ) ಹೊಂದಿರಬಹುದು ಎಂದು ಶಂಕಿಸಲಾಗಿದೆ.
ಇದರಿಂದ ಕೆಮಿಕಲ್‌ಗಳು ಸೋರಿಕೆಯಾಗುವ ಸಾಧ್ಯತೆಯೂ ಇದೆ. ಕಂಟೇನರ್ ತೀರಕ್ಕೆ ಬಂದರೆ ಪೊಲೀಸರಿಗೆ ತಿಳಿಸಲು ಸಾರ್ವಜನಿಕರಿಗೆ ನಿರ್ದೇಶನ ನೀಡಲಾಗಿದೆ.