ಪೂಂಚ್: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ಸಮಯದಲ್ಲಿ ಪಾಕಿಸ್ತಾನದ ಗಡಿಯಾಚೆಗಿನ ಶೆಲ್ ದಾಳಿಯಲ್ಲಿ ಗಾಯಗೊಂಡವರನ್ನು ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಭೇಟಿಯಾದರು. ಜಮ್ಮು ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಪೂಂಚ್ ತಲುಪಿ, ಶೆಲ್ ದಾಳಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿದರು. ರಾಹುಲ್ ಗಾಂಧಿ ಶಾಲಾ ಮಕ್ಕಳೊಂದಿಗೆ ಸಂವಹನ ನಡೆಸಿ ಅವರ ಮನೋಸ್ಥೈರ್ಯವನ್ನು ಹೆಚ್ಚಿಸಿದರು.
“ಈಗ, ನೀವು ಅಪಾಯವನ್ನು ಮತ್ತು ಸ್ವಲ್ಪ ಭಯಾನಕ ಪರಿಸ್ಥಿತಿಯನ್ನು ನೋಡಿದ್ದೀರಿ, ಆದರೆ ಚಿಂತಿಸಬೇಡಿ, ಎಲ್ಲವೂ ಸರಿಯಾಗುತ್ತದೆ.” ಈ ಸಮಸ್ಯೆಯನ್ನು ನಿಭಾಯಿಸುವ ನಿಮ್ಮ ಮಾರ್ಗವೆಂದರೆ ಕಷ್ಟಪಟ್ಟು ಓದುವುದು, ಶಾಲೆಯಲ್ಲಿ ಬಹಳಷ್ಟು ಸ್ನೇಹಿತರನ್ನು ಮಾಡಿಕೊಳ್ಳಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಶೆಲ್ ದಾಳಿಯಲ್ಲಿ ಹಾನಿಗೊಳಗಾದ ಪ್ರಮುಖ ಕ್ಷೇತ್ರಗಳಿಗೂ ಅವರು ಭೇಟಿ ನೀಡಿದರು. ಪಾಕಿಸ್ತಾನದ ಶೆಲ್ ದಾಳಿಯಲ್ಲಿ ಹಾನಿಗೊಳಗಾದ ಗುರುದ್ವಾರ ಮತ್ತು ದೇವಾಲಯಕ್ಕೂ ರಾಹುಲ್ ಗಾಂಧಿ ಭೇಟಿ ನೀಡಿ ಬಳಿಕ ಗುಂಡಿನ ದಾಳಿಯಲ್ಲಿ ಮೃತಪಟ್ಟ ಮಕ್ಕಳ ಮನೆಗಳಿಗೂ ಭೇಟಿ ನೀಡಿದ್ದಾರೆ.
ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಭಾರತ ಮೇ 7ರಂದು ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಒಂಬತ್ತು ಭಯೋತ್ಪಾದಕ ಉಡಾವಣಾ ಪ್ಯಾಡ್‌ಗಳ ಮೇಲೆ ನಿಖರವಾದ ದಾಳಿ ನಡೆಸಿತ್ತು. ಇದಾದ ನಂತರ ಪಾಕಿಸ್ತಾನ ಪೂಂಚ್ ವಲಯದಲ್ಲಿ ಗಡಿಯುದ್ದಕ್ಕೂ ನಾಗರಿಕರನ್ನು ಗುರಿಯಾಗಿಸಿ ಫಿರಂಗಿ ಶೆಲ್ ದಾಳಿ ಮತ್ತು ಮೋರ್ಟಾರ್ ಶೆಲ್ ದಾಳಿ ನಡೆಸಿ ಮುಗ್ಧರ ಬಲಿ ಪಡೆದಿತ್ತು.
ಮೇ 7 ರಿಂದ 10ರ ನಡುವೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ನಡೆಸಿದ ಶೆಲ್ ದಾಳಿ, ಕ್ಷಿಪಣಿಗಳು ಮತ್ತು ಡ್ರೋನ್ ದಾಳಿಯಲ್ಲಿ 28 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಪೂಂಚ್ ಜಿಲ್ಲೆಯೊಂದರಲ್ಲೇ 13 ಜನರು ಸಾವನ್ನಪ್ಪಿದ್ದಾರೆ. 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಅಂತರರಾಷ್ಟ್ರೀಯ ಗಡಿಯ ಸಮೀಪವಿರುವ ಪ್ರದೇಶಗಳಿಂದ ಸಾವಿರಾರು ಜನರು ಪಲಾಯನ ಮಾಡಿ ಸರ್ಕಾರಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯಬೇಕಾಯಿತು. ನಾಲ್ಕು ದಿನಗಳ ಮಿಲಿಟರಿ ಸಂಘರ್ಷದ ನಂತರ, ಮೇ 10ರಂದು ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಿಸಿದವು