ಬೆಳಗಾವಿ: ಬಾಲಕಿ ಮೇಲೆ ಅತ್ಯಾಚಾರ ಆರೋಪ; ರಾಮಮಂದಿರದ ಲೋಕೇಶ್ವರ ಮಹಾರಾಜ ಸ್ವಾಮೀಜಿ ಬಂಧನ

ಬೆಳಗಾವಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿಯ ರಾಮಮಂದಿರದ ಲೋಕೇಶ್ವರ ಮಹಾರಾಜ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆಯ ಲಾಡ್ಜ್‌ವೊಂದರಲ್ಲಿ 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಬಗ್ಗೆ ಬಾಗಲಕೋಟೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಬಾಗಲಕೋಟೆ ಪೊಲೀಸರು ಮೂಡಲಗಿ ಠಾಣೆಗೆ ವರ್ಗಾಯಿಸಿದ್ದರು. ಅದರಂತೆ, ಮೂಡಲಗಿ ಪೊಲೀಸರು ಮೇಖಳಿಯ ರಾಮಮಂದಿರಕ್ಕೆ ಆಗಮಿಸಿ ಲೋಕೇಶ್ವರ ಮಹಾರಾಜ ಸ್ವಾಮೀಜಿ ಅವರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.

ಬಾಲಕಿಗೆ 17 ವರ್ಷ ಆಗಿದ್ದು ಆಕೆ ಹುಷಾರಿಲ್ಲದೇ ಇದ್ದಾಗ ಪೋಷಕರು ಆಕೆಯನ್ನು ಆಗಾಗ ಮಠಕ್ಕೆ ತಂದು ಬಿಟ್ಟು ಹೋಗುತ್ತಿದ್ದರು. ವಾರಗಟ್ಟಲೇ ಮಗಳನ್ನು ಸ್ವಾಮೀಜಿಯ ಸುಪರ್ದಿಗೆ ಒಪ್ಪಿಸಿ ಮಠದಲ್ಲೇ ಬಿಡುತ್ತಿದ್ದರು.

ಮೇ 13 ರಂದು ಮೂಡಲಗಿ ವ್ಯಾಪ್ತಿಯ ಭಕ್ತರ ಮಗಳನ್ನು ಡ್ರಾಪ್ ಕೊಡುವ ನೆಪದಲ್ಲಿ ರಾಯಚೂರಿಗೆ ಕರೆದೊಯ್ದಿದ್ದ. ಅಲ್ಲಿ ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡಿ, ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ. ಮೇ 15ರಂದು ರಾತ್ರಿ ಮತ್ತೆ ಬಾಗಲಕೋಟೆಗೆ ಕರೆದುಕೊಂಡು ಹೋಗಿ, ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡಿದ್ದ. ಅಲ್ಲಿಯೂ ಅಪ್ರಾಪ್ತೆ ಮೇಲೆ ಸ್ವಾಮೀಜಿ ಅತ್ಯಾಚಾರ ಮಾಡಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಅತ್ಯಾಚಾರದ ಬಗ್ಗೆ ಯಾರ ಬಳಿಯಾದರೂ ಹೇಳಿದರೆ ಕೊಲೆ ಮಾಡುವುದಾಗಿ ಸ್ವಾಮೀಜಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಬಾಗಲಕೋಟೆಯ ಲಾಡ್ಜ್‌ನಲ್ಲಿ ಅತ್ಯಾಚಾರ ನಡೆಸಿದ ಬಳಿಕ ಬಾಲಕಿಯನ್ನು ಸ್ವಾಮೀಜಿ ಮಹಾಲಿಂಗಪುರದ ಬಸ್‌ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದ. ಬಸ್‌ ನಿಲ್ದಾಣದಲ್ಲಿ ಯುವತಿಯ ತಂದೆ ಹಾಗೂ ಸಂಬಂಧಿಕರು ಇರುವುದನ್ನು ಕಂಡ ಯುವತಿ, ಅವರ ಬಳಿ ಹೋಗಿ ಸ್ವಾಮೀಜಿಯ ಕೃತ್ಯದ ಬಗ್ಗೆ ವಿಷಯ ತಿಳಿಸಿದ್ದಾರೆ. ಆಗ ಬಾಲಕಿಯ ಪೋಷಕರು ಬಾಗಲಕೋಟೆ ಮಹಿಳಾ ಠಾಣೆಗೆ ದೂರು ನೀಡಿದ್ದರು. ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಸರ್ಕಾರಿ ಗಾರಾಯಣ್ ಭೂಮಿಯಲ್ಲಿ ಲೋಕೇಶ್ವರ ಸ್ವಾಮೀಜಿ ರಾಮಮಂದಿರ ನಿರ್ಮಿಸಿದ್ದು, ಮಠದಿಂದಲೇ ಸ್ವಾಮೀಜಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

error: Content is protected !!