ಮಂಗಳೂರು: ತುಳುವರಿಗಾಗಿಯೇ ಇರುವ ಮಂಗಳೂರಿನ ಏಕೈಕ ತುಳು ಅಕಾಡೆಮಿ ಭವನದಲ್ಲಿ ತುಳು ಭಾಷೆ, ಸಂಸ್ಕೃತಿಗೆ ಸಂಬಂಧಿಸಿದ ಸಭೆ-ಸಮಾರಂಭ-ಕಾರ್ಯಕ್ರಮಗಳಿಗೆ ಈವರೆಗೂ ಇದ್ದ ಸಂಪೂರ್ಣ ರಿಯಾಯಿತಿಯನ್ನು ತೆಗೆದು ಹಾಕಿ ಇತರೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವಂತೆ ಬಾಡಿಗೆ ವಸೂಲಿ ಮಾಡುವ ನಿರ್ಧಾರ ಕೈಗೊಂಡಿರುವ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲಿನ ಸಂಸ್ಕೃತಿಯ ಬಗ್ಗೆ ಎಳ್ಳಷ್ಟೂ ಕಾಳಜಿಯೇ ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ, ದಯಾನಂದ ಕತ್ತಲ್ ಸಾರ್ ರವರು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ತುಳು ಭಾಷೆ, ಸಂಸ್ಕೃತಿಗೆ ಸಂಬಂಧಪಟ್ಟ ಯಾವುದೇ ಕಾರ್ಯಕ್ರಮಗಳಿಗೆ ಅಕಾಡೆಮಿಯ ಭವನವನ್ನು ವಿಶೇಷ ಆದ್ಯತೆಯ ಮೇರೆಗೆ ಸಂಪೂರ್ಣ ಉಚಿತವಾಗಿ ನೀಡುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಇದರಿಂದ ತುಳು ಯಕ್ಷಗಾನ, ತಾಳಮದ್ದಳೆ, ತುಳುಲಿಪಿ ಕಾರ್ಯಗಾರ, ತುಳು ಚಿತ್ರರಂಗ ಸೇರಿದಂತೆ ಈ ನೆಲದ ಸಂಸ್ಕೃತಿಗೆ ಸಂಬಂಧಪಟ್ಟ ಎಲ್ಲಾ ಕಾರ್ಯಕ್ರಮಗಳು ಉಚಿತವಾಗಿ ನಡೆದಿದ್ದವು. ಆದರೆ ಇದೀಗ ಕಾಂಗ್ರೆಸ್ ಆಡಳಿತದ ತುಳು ಅಕಾಡೆಮಿಯು ಕೈಗೊಂಡಿರುವ ನಿರ್ಧಾರದಿಂದ ತುಳುವರಿಗೆ ಅನ್ಯಾಯವಾಗಲಿದ್ದು ನಮ್ಮ ಭಾಗದಲ್ಲೇ ನಮ್ಮವರಿಗೆ ಪ್ರೋತ್ಸಾಹ ಸಿಗದೇ ಹೋದರೆ ಇನ್ನೆಲ್ಲಿ ಸಿಗಲು ಸಾಧ್ಯ? ತುಳು ಅಕಾಡೆಮಿ ಇರುವುದೇ ತುಳು ಭಾಷೆ-ಸಂಸ್ಕೃತಿಯ ಅಭಿವೃದ್ಧಿಗಾಗಿ. ರಾಜ್ಯ ಸರ್ಕಾರವು ತನ್ನ ತಪ್ಪನ್ನು ತಿದ್ದಿಕೊಳ್ಳದೇ ಇದೇ ಧೋರಣೆಯನ್ನು ಮುಂದುವರಿಸುವುದಾದರೆ ನಮ್ಮ ಸಂಸ್ಕೃತಿಯ ಉಳಿವು ಹಾಗೂ ಪ್ರೋತ್ಸಾಹಕ್ಕಾಗಿ ತುಳುವರೊಂದಿಗೆ ಸೇರಿಕೊಂಡು ಬಿಜೆಪಿ ವತಿಯಿಂದಲೇ ಪರ್ಯಾಯ ಮಾರ್ಗ ಹುಡುತ್ತೇವೆ ಎಂದರು.
ಅಲ್ಲದೇ ಈ ಹಿಂದಿನ ಬಿಜೆಪಿ ಆಡಳಿತದಲ್ಲಿ ನೀಡಲಾಗುತ್ತಿದ್ದ “ತುಳು ಕೋಟ ಸರ್ಟಿಫಿಕೇಟ್” ನಿಂದ ಅನೇಕಾರು ತುಳುವ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ 3 ಲಕ್ಷಕ್ಕೂ ಅಧಿಕ ಸಬ್ಸಿಡಿ ಸಿಗುತ್ತಿತ್ತು. ಈಗ ಅದಕ್ಕೂ ಕಾಂಗ್ರೆಸ್ ಸರ್ಕಾರ ಕತ್ತರಿ ಹಾಕಿದೆ. ತುಳುಲಿಪಿಯಲ್ಲಿ ಡೌಟ್ ಇದೆ ಎಂಬ ನೆಪವೊಡ್ಡಿ ತುಳುಲಿಪಿ ಕಲಿತವರಿಗೆ ಅಕಾಡೆಮಿ ವತಿಯಿಂದ ನೀಡಲಾಗುತ್ತಿದ್ದ ಸರ್ಟಿಫಿಕೇಟ್ ಸಹ ನಿಲ್ಲಿಸಲಾಗಿದ್ದು ಕೂಡಲೇ ರಾಜ್ಯ ಕಾಂಗ್ರೆಸ್ ಸರ್ಕಾರ ತುಳು ಭಾಷೆಯ ಬಗ್ಗೆ ತೋರುತ್ತಿರುವ ಅನ್ಯಾಯ ಧೋರಣೆಯನ್ನು ನಿಲ್ಲಿಸಬೇಕೆಂದು ಶಾಸಕರು ಆಗ್ರಹಿಸಿದರು