ಮತ್ತೊಬ್ಬ ʻಕಾಮಿʼಡಿ ಕಿಲಾಡಿ ವಿರುದ್ಧ ಆರೋಪ!

ಬೆಂಗಳೂರು: ‘ಕಾಮಿಡಿ ಕಿಲಾಡಿಗಳು ಸೀಸನ್ 2’ರಲ್ಲಿ ಸ್ಪರ್ಧಿಯಾಗಿದ್ದ ಮಡೆನೂರು ಮನು ವಿರುದ್ಧ ನಿನ್ನೆಯಷ್ಟೇ ಅತ್ಯಾಚಾರ ಆರೋಪದ ದೂರು ದಾಖಲಾಗಿದ್ದು ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ ಅದೇ ಶೋನ ಇನ್ನೊಬ್ಬ ಸ್ಪರ್ಧಿ ಅಪ್ಪಣ್ಣ ರಾಮದುರ್ಗ ವಿರುದ್ಧ ಕಿರುಕುಳ ಆರೋಪದ ಆಡಿಯೋ ವೈರಲ್ ಆಗಿದೆ. ಈ ಆರೋಪವನ್ನು ಅಪ್ಪಣ್ಣ ರಾಮದುರ್ಗ ತಳ್ಳಿಹಾಕಿದ್ದು ಆಡಿಯೋವನ್ನು ಮಡೆನೂರು ಮನು ರೆಕಾರ್ಡ್ ಮಾಡಿಸಿದ್ದಾಗಿ ದೂರಿದ್ದಾರೆ.
ವೈರಲ್‌ ಆಡಿಯೋದಲ್ಲಿ ಸಂತ್ರಸ್ತೆ ಕಾಮಿಡಿ ಕಿಲಾಡಿಗಳು ಸೀಸನ್ 2ರಿಂದ ಅಪ್ಪಣ್ಣ ರಾಮದುರ್ಗ ನನಗೆ ತೊಂದರೆ ಕೊಡುತ್ತಿದ್ದಾರೆ. ಶೋನಲ್ಲಿ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದಾರೆ. ಅವನ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನನ್ನ ಬಾಯ್‌ಫ್ರೆಂಡ್ ಅಲೋಕ್ ಜೊತೆ ಬ್ರೇಕಪ್ ಆಗಲು ಅಪ್ಪಣ್ಣ ಕಾರಣ. ಒಂದು ವೇಳೆ ನಾನು ಆತ್ಮಹತ್ಯೆ ಮಾಡಿಕೊಂಡರೆ, ಅದಕ್ಕೆ ಅಪ್ಪಣ್ಣ ಕಾರಣ. ಆತನನ್ನು ಸುಮ್ಮನೆ ಬಿಡಬೇಡಿʼ ಎಂದಿದ್ದಾರೆ. ಅಪ್ಪಣ್ಣ ರಾಮದುರ್ಗ ʻಒಂದೂವರೆ ವರ್ಷದ ಹಿಂದೆ ಸಂತ್ರಸ್ತೆಯ ಜೊತೆ ಸಂಪರ್ಕದಲ್ಲಿದ್ದೆ, ಆದರೆ ನಂತರ ಯಾವುದೇ ಸಂಪರ್ಕ ಇಲ್ಲ. ಈ ಆಡಿಯೋವನ್ನು ಮಡೆನೂರು ಮನು ಒತ್ತಾಯಪೂರ್ವಕವಾಗಿ ರೆಕಾರ್ಡ್ ಮಾಡಿಸಿದ್ದಾರೆ. ಇದು ಸಂಪೂರ್ಣ ಸುಳ್ಳುʼ ಎಂದಿದ್ದಾರೆ.

error: Content is protected !!