ಬೆಂಗಳೂರು: ಬಹುಭಾಷಾ ನಟಿ ತಮನ್ನಾ ಭಾಟಿಯಾರನ್ನು ರಾಜ್ಯ ಸರಕಾರ ಮೈಸೂರು ಸ್ಯಾಂಡಲ್ ಸೋಪ್ ಎರಡು ವರ್ಷಗಳ ಕಾಲ ರಾಯಭಾರಿಯಾಗಿ ನೇಮಿಸಿರುವುದು ಭಾರೀ ವಿರೋಧ ವ್ಯಕ್ತವಾಗಿದೆ. ಕರ್ನಾಟಕದ ಉತ್ಪನ್ನಕ್ಕೆ ಕನ್ನಡದ ನಟಿಯರನ್ನೇ ಯಾಕೆ ಆಯ್ಕೆ ಮಾಡಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ. ಈ ಮಧ್ಯೆ ಸಚಿವ ಎಂ.ಬಿ.ಪಾಟೀಲ್ ತಮನ್ನಾರನ್ನೇ ಯಾಕೆ ಆಯ್ಕೆ ಮಾಡಿದ್ದೇವೆ ಎಂಬ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ.
ʻಇದು ಬ್ಯುಸಿನೆಸ್ ಆಗಿದ್ದು, ಇಲ್ಲಿ ಸ್ಪರ್ಧೆ ಹೆಚ್ಚಾಗಿದೆ. ನಮ್ಮದು ಪ್ಯಾನ್ ಇಂಡಿಯಾ ಬ್ಯುಸಿನೆಸ್ ಆಗಿದೆ. ಈಗ ವಿದೇಶಕ್ಕೂ ಬ್ಯುಸಿನೆಸ್ ಒಯ್ಯಬೇಕೆಂಬ ಯೋಜನೆ ಇದಾಗಿದೆ. ಹೀಗಾಗಿ ರಾಯಭಾರಿ ಆಯ್ಕೆ ಮಾಡಲು ಒಂದು ಕಮಿಟಿ ರಚಿಸಲಾಗಿತ್ತು. ಎಲ್ಲಾ ವಿಚಾರ ಗಮನದಲ್ಲಿಟ್ಟುಕೊಂಡು ನಿರ್ಧಾರ ಮಾಡಲಾಗಿದೆ. ಹೊಸ ಸೋಪುಗಳನ್ನು ಪರಿಚಯಿಸಲಾಗುತ್ತಿದೆ. ಪರ್ ಫ್ಯೂಮ್ ಮಾರ್ಕೆಟ್ಗೂ ಮೈಸೂರು ಸ್ಯಾಂಡಲ್ ಕಾಲಿಟ್ಟಿದೆ. 5 ಸಾವಿರ ಕೋಟಿ ಬ್ಯುಸಿನೆಸ್ಗೆ ತೆಗೆದುಕೊಂಡು ಹೋಗುವ ಯೋಜನೆ ಇದೆ. ತಮನ್ನಾ ಆಯ್ಕೆಗೂ ಮುನ್ನವೇ ರಶ್ಮಿಕಾ ಮಂದಣ್ಣ ಅವರನ್ನೂ ಕೇಳಿದ್ವಿ, ಅವರು ಬೇರೆ ಕಡೆ ಸೈನ್ ಮಾಡಿದ್ದೇನೆ ಆಗಲ್ಲ ಎಂದು ಹೇಳಿದ್ರು. ಶ್ರೀಲೀಲಾ, ಪೂಜಾ ಗಾಂಧಿ, ಕಿಯಾರಾ ಅಡ್ವಾಣಿ ಕೂಡ ಆಗೋದಿಲ್ಲ ಎಂದು ಹೇಳಿದ್ದಕ್ಕೆ ಕೊನೆಗೆ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿದ್ದೇವೆ.
ಯಾರೇ ರಾಯಭಾರಿ ಆದ್ರೂ ಎರಡು ವರ್ಷ ಮಾತ್ರ, ದೀಪಿಕಾ ಪಡುಕೋಣೆ ನಮ್ಮ ಬಜೆಟ್ಗೆ ಎಟುಕದವರು, ಹೀಗಾಗಿ ಅವರನ್ನು ಸಂಪರ್ಕ ಮಾಡಿಲ್ಲ. ಕನ್ನಡಕ್ಕೆ ಅವಮಾನ ಮಾಡಬೇಕು ಅಂತ ಉದ್ದೇಶ ಇಲ್ಲ. ಮುಂದೆ ವಿದೇಶಿಯವರನ್ನೂ ರಾಯಭಾರಿಯಾಗಿ ಆಯ್ಕೆ ಮಾಡುವ ಉದ್ದೇಶ ಇದೆ, ಆ ಕಾಲ ಬರಲಿ ಅಂತ ಹಾರೈಸಿ ಇದೆ ಎಂದು ಹೇಳಿದರು.