ಹರೀಶ್‌ ಪೂಂಜಾ ಕೋಮು ದ್ವೇಷ ಭಾಷಣ ಪ್ರಕರಣ: ಹೈಕೋರ್ಟ್‌ ಹೇಳಿದ್ದೇನು?

ಬೆಂಗಳೂರು : ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಕೋಮು ದ್ವೇಷ ಭಾಷಣ ಪ್ರಕರಣದ ಎಫ್ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಹರೀಶ್ ಪೂಂಜಾ ಪರ ವಕೀಲರು ವಾದ ಮಂಡಿಸಿ, ಇಡೀ ದೂರನ್ನು ಓದಿದರೆ ದಾಖಲಿಸಿರುವ ಸೆಕ್ಷನ್‌ಗಳು ಅನ್ವಯಿಸುವುದಿಲ್ಲ. ಧರ್ಮಗಳ ನಡುವೆ ದ್ವೇಷ ಹರಡುವಂಥ ಕೆಲಸವನ್ನು ಪೂಂಜಾ ಅವರು ಮಾಡಿಲ್ಲ. ಸರ್ಕಾರದ ಪರ ವಕೀಲರು ಆರೋಪ ಪಟ್ಟಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಹಾಗಾಗಿ ಆರೋಪ ಪಟ್ಟಿ ವಜಾಗೊಳಿಸಲು ಮನವಿ ಮಾಡಿದರು‌.

ಈ ವೇಳೆ ದೂರುದಾರ ಇಬ್ರಾಹಿಂ ಪರ ವಕೀಲ ಎಸ್‌. ಬಾಲನ್ ಅವರು ಪ್ರತಿವಾದಿಸಿ, ಅರ್ಜಿಯನ್ನು ತಿದ್ದುಪಡಿ ಮಾಡದೇ ಇರುವುದರಿಂದ ಕೋರಿಕೆಯನ್ನು ಮನ್ನಿಸಬಾರದು. ತೆಕ್ಕಾರಿನ ಕಂತ್ರಿಗಳು ಎಂದು ಮುಸ್ಲಿಮ್ ಸಮುದಾಯವನ್ನು ನಿಂದಿಸಿದ್ದಾರೆ. ಪೂಂಜಾ ಅವರ ಹೇಳಿಕೆ ಅಗತ್ಯವಿರಲಿಲ್ಲ ಎಂದು ಎಫ್‌ಐಆ‌ರ್ ಅಂಶಗಳನ್ನು ಬಾಲನ್ ಅವರು ಉಲ್ಲೇಖಿಸಿ ಪೂಂಜಾ ಅವರ ಹೇಳಿಕೆಗೆ ವಿಡಿಯೋ ದಾಖಲೆ ಇದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ವಾದ ಪ್ರತಿವಾದ ಆಲಿಸಿದ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ

error: Content is protected !!