ಮಂಗಳೂರು: ಅದು ಮೇ 22, 2010. ಈ ದಿನ ದುಬೈನಿಂದ ಮಂಗಳೂರಿಗೆ ಹಾರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ ನಂಬರ್ 812 ನಲ್ಲಿದ್ದ 166 ಪ್ರಯಾಣಿಕರು ಮತ್ತು ಸಿಬ್ಬಂದಿಯ ಪೈಕಿ 158 ಮಂದಿ ಮಂಗಳೂರು(ಬಜ್ಪೆ) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೂದಿಯಾಗದರು. ಈ ದುರಂತ ಇಂದಿಗೂ ಅವರ ಕುಟುಂಬಿಕರಿಗೆ ಕಾಡುತ್ತಿದೆ.
ದುರಂತದಲ್ಲಿ ತನ್ನ ಪತಿ ಇಗ್ನೇಷಿಯಸ್ ಡಿಸೋಜಾರನ್ನು ಕಳೆದುಕೊಂಡ ನೋವು ಪೆಟ್ರೀಷಿಯಾ ಡಿ’ಸೋಜಾ ಅವರಿಗೆ ಇಂದಿಗೂ ಕಾಡುತ್ತಿದೆ.
“ಇಗ್ನೇಷಿಯಸ್ ಮೇ 22, 2010 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ IX-812 ರಲ್ಲಿ ಪ್ರಯಾಣಿಸುತ್ತಿದ್ದರು. ನನ್ನ ಕಿರಿಯ ಮಗ ಕ್ರಿಸ್ ಗ್ಯಾರಿ ಡಿ’ಸೋಜಾ ಅಪ್ಪನಲ್ಲಿ, ‘ಅಪ್ಪಾ, ನಿಮಗೆ ನಮ್ಮೊಂದಿಗೆ ಕಳೆಯಲು ಸಮಯವಿಲ್ಲ, ನಮ್ಮನ್ನು ಪ್ರವಾಸಕ್ಕೆ ಎಲ್ಲಿಗಾದರೂ ಕರೆದೊಯ್ಯಿರಿ ಎಂದು ಹೇಳಿದ್ದ. ಎಪ್ರಿಲ್‌ನಲ್ಲಿಯೇ ಹೋಗುವ ಯೋಜನೆ ಹಾಕಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇಗ್ನೇಷಿಯಸ್ ಜೂನ್ 1 ರಂದು ಅಬುಧಾಬಿಯಿಂದ ಬರಲು ಯೋಜನೆ ಹಾಕಿಕೊಂಡಿದ್ದರು. ಆದರೆ ನನ್ನ ಮಗನ ಮಾತು ಕೇಳಿ ಅದಕ್ಕಿಂತ ಮುಂಚೆಯೇ ಅಭುದಾಬಿಯಿಂದ ಬರಲು ನಿರ್ಧರಿಸಿದ್ದರಿಂದ ಇಂದು ಅವರು ನಮ್ಮೊಂದಿಗೆ ಇಲ್ಲ” ಎಂದು ಪೆಟ್ರೀಷಿಯಾ ಡಿ’ಸೋಜಾ ಕಣ್ಣೀರು ಹಾಕುತ್ತಾರೆ.
“ವೃತ್ತಿಯಲ್ಲಿ ಅಡುಗೆಯವರಾಗಿದ್ದ ಇಗ್ನೇಷಿಯಸ್ ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಗಳಿಗೊಮ್ಮೆ ತಮ್ಮ ಮಕ್ಕಳನ್ನು ಭೇಟಿ ಮಾಡಲು ಮನೆಗೆ ಬರುತ್ತಿದ್ದರು. ಈಗ ಅ ಎಂಜಿನಿಯರ್ ಆಗಿರುವ ಮಗಳು ಪ್ರೆಸಿಟಾ ಮತ್ತು ಫಾರ್ಮಸಿ ಮುಗಿಸಿರುವ ಮಗ ಕ್ರಿಸ್ ತಮ್ಮ ತಂದೆಯನ್ನು ನೋಡಿದ್ದೇ ಕಡಿಮೆ” ಎಂದು ಅವರು ನೋವು ತೋಡಿಕೊಳ್ಳುತ್ತಿದ್ದಾರೆ.
ಉಡುಪಿಯ ಮಲ್ಪೆ ನಿವಾಸಿ ಬಿ.ಎಚ್. ಅಬೂಬಕ್ಕರ್ ಅವರು ದುಬೈನಲ್ಲಿ ಗಾರ್ಡನ್‌ನಲ್ಲಿ ಕೆಲಸ ಹುಡುಕಲು ಹೋಗಿದ್ದ ತಮ್ಮ ಎರಡನೇ ಮಗ ನವೀದ್ ಇಬ್ರಾಹಿಂರನ್ನು ಕಳೆದುಕೊಂಡಿದ್ದಾರೆ. ಕಂಟ್ರಾಕ್ಟ್ ಮುಗಿಯುವ ಮುನ್ನವೇ ಕೆಲಸಕ್ಕೆ ರಾಜೀನಾಮೆ ನೀಡಿ, ಉತ್ತಮ ಕೆಲಸ ಹುಡುಕುವ ಆಶಾವಾದದಿಂದ ಮನೆಗೆ ಬರಲೆಂದು ವಿಮಾನ ಹತ್ತಿದ್ದ ಮಗನನ್ನು ನಾನು ಕಳೆದುಕೊಂಡೆ” ಎಂದು ಅಬೂಬಕ್ಕರ್ ಇಂದಿಗೂ ಅಳುತ್ತಿದ್ದಾರೆ.
ಬದುಕುಳಿದ ಏಳು ಜನರ ಪೈಕಿ ಒಬ್ಬರು ವಾಮಂಜೂರಿನವರು. ಅವರ ಹೆಸರು ಜೋಯಲ್ ಪ್ರತಾಪ್ ಡಿಸೋಜಾ (39). ಅವರಿಗೆ ಈ ದುರಂತ ಇಂದಿಗೂ ದುಸ್ವಪ್ನದಂತೆ ಕಾಡುತ್ತಿದೆ.
ವಿಮಾನ ದುರಂತಕ್ಕೀಡಾಗುತ್ತಿದ್ದಂತೆ ವಿಮಾನದಿಂದ ಜಿಗಿದ ಮೊದಲ ವ್ಯಕ್ತಿ ಇವರು. ದುಬೈಯಲ್ಲಿ ಉದ್ಯೋಗ ನೇಮಕಾತಿ ಪತ್ರವನ್ನು ಪಡೆದು ಖುಷಿಯಿಂದ ವಿಮಾನ ಹತ್ತಿ ಸೀಟ್ ಸಂಖ್ಯೆ 23 ರಲ್ಲಿ ಕುಳಿತಿದ್ದರು. ವಿಮಾನ ಅಪಘಾತಕ್ಕೀಡಾಗುತ್ತಿದ್ದಂತೆ ವಿಮಾನದಿಂದ ಜಿಗಿದು ಪ್ರಾಣ ಉಳಿಸಿಕೊಂಡರು. “ನನಗೆ ಬೆನ್ನು ನೋವು ಅಥವಾ ಕಾಲು ನೋವು ಬಂದಾಗಲೆಲ್ಲಾ, ಆ ಘಟನೆ ದುಃಸ್ವಪ್ನದಂತೆ ನೆನಪಿಗೆ ಬರುತ್ತದೆ. ಆಗ ನಾನು ಪ್ಯಾನಿಕ್ ಆಗುತ್ತೇನೆ. ಮೊಣಕಾಲು ನೋವಾಗುತ್ತದೆ. ಆಗ ನಾನು ನೋವು ನಿವಾರಕ ಸ್ಪ್ರೇ ಬಳಸುತ್ತೇನೆ. ಈಗಲೂ ಆ ಘಟನೆ ನೆನಪಾಗುತ್ತಿದ್ದು, ಮರೆಯಲು ಸಾಧ್ಯವಾಗುತ್ತಿಲ್ಲ. ಅದರ ಮಾನಸಿಕ ವೇದನೆಯಿಂದ ಇಂದಿಗೂ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗುತ್ತಿಲ್ಲ” ಎಂದು ನೆನಪಿಸುತ್ತಾರೆ.
ದುಬೈನಲ್ಲಿ ಇನ್ನೂ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿರುವ ಜೋಯಲ್, ಪ್ರತಿ ಬಾರಿ ವಿಮಾನ ಹತ್ತಿಳಿಯುವಾಗಲೂ ಆ ದುರಂತದ ಫ್ಲ್ಯಾಶ್‌ಬ್ಯಾಕ್ ಇನ್ನೂ ನನಗೆ ನೆನಪಿಗೆ ಬರುತ್ತದೆ ಎನ್ನುತ್ತಾರೆ.