ಮೃತದೇಹ ನಾಳೆ ಹುಟ್ಟೂರಿಗೆ
ಬೆಳ್ತಂಗಡಿ: ನವದೆಹಲಿಯ ಏರೋಸ್ಪೇಸ್ ಇಂಜಿನಿಯರ್ ಉದ್ಯೋಗಿಯಾಗಿದ್ದ ಆಕಾಂಕ್ಷಾ ಎಸ್. ನಾಯರ್(22) ಆತ್ಮಹತ್ಯೆಗೆ ಪ್ರೊಫೆಸರ್ ಬಿಜಿಲ್ ಸಿ. ಮ್ಯಾಥ್ಯೂನೇ ಕಾರಣ ಎಂದು ಆರೋಪಿಸಿರುವ ಮನೆಮಂದಿ ಆತನ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ.
ಬಿಜಿಲ್ ಸಿ. ಮ್ಯಾಥ್ಯೂ ಆಕಾಂಕ್ಷಾಳನ್ನು ಕಟ್ಟಡದಿಂದ ದೂಡಿ ಹಾಕಿ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ. ಪಂಜಾಬ್ ಪೊಲೀಸರು, ಈಗಾಗಲೇ ಕೇರಳ ಮೂಲದ ಆರೋಪಿ ಪ್ರೊಫೆಸರ್ ಬಿಜಿಲ್ ಸಿ. ಮ್ಯಾಥ್ಯೂನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ನಿನ್ನೆ ಆಕಾಂಕ್ಷಾ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮೃತದೇಹವನ್ನು ಆಸ್ಪತ್ರೆಯವರು ಬಿಟ್ಟುಕೊಟ್ಟಿದ್ದಾರೆ. ಮೃತದೇಹವನ್ನು ಅಂಬ್ಯುಲೆನ್ಸ್ ಮೂಲಕ ದೆಹಲಿ ವಿಮಾನ ನಿಲ್ದಾಣಕ್ಕೆ ಸಾಗಿಸಿ ಅಲ್ಲಿಂದ ಅದರಂತೆ ಮೇ 20 ರಂದು ರಾತ್ರಿ 8 ಗಂಟೆಗೆ ಸ್ಪೈಸ್ ಏರ್ ಲೈನ್ಸ್ ವಿಮಾನದಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅಂದುರಾತ್ರಿ 11 ಗಂಟೆಗೆ ಬರಲಿದೆ. ಅಲ್ಲಿಂದ ಅಂಬ್ಯುಲೆನ್ಸ್ ಮೂಲಕ ಧರ್ಮಸ್ಥಳ ಬೊಳಿಯರ್ ಮನೆಗೆ ತಂದು ಮೇ 21 ರಂದು ಬೆಳಗ್ಗೆ ಮೃತದೇಹ ಮನೆಗೆ ತಲುಪಲಿದೆ. ಆಕಾಂಕ್ಷ ಕೆಲಸ ಮಾಡುತ್ತಿದ್ದ ಕಂಪೆನಿಯ ವತಿಯಿಂದಲೇ ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.