ಕೊಸ್ಟರಿಕಾ: ಜೈಲಿಗೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಬೆಕ್ಕನ್ನು ಕೊಸ್ಟಾರಿಕಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಲ್ಲದೆ ಬೆಕ್ಕಿನ ಬಳಿ ಇದ್ದ ಮಾದಕವಸ್ತುಗಳನ್ನು ಪೊಲೀಸರು ಹಾಗೂ ಜೈಲಿನ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಕೋಸ್ಟರಿಕಾದ ಪೊಕೊಸಿ ಸೆರೆಮನೆಯ ಕಾವಲುಗಾರರಿಗೆ ಜೈಲಿನ ಸಮೀಪ ಬೆಕ್ಕೊಂದು ಸಂಚರಿಸುತ್ತಿರುವುದನ್ನು ಪತ್ತೆಹಚ್ಚಿದ್ದಾರೆ. ಅದರ ದೇಹಕ್ಕೆ ಬಿಗಿಯಾಗಿ ಮುಚ್ಚಿದ ಎರಡು ಪೊಟ್ಟಣಗಳನ್ನು ಕಟ್ಟಿರುವುದನ್ನು ಅವರು ಗಮನಿಸಿದ ಅವರು ಕುತೂಹಲದಿಂದ ಹಿಡಿದು ಪರಿಶೀಲಿಸಿದಾಗ ಅದರಲ್ಲಿ ಮಾದಕ ವಸ್ತುಗಳು ಪತ್ತೆಯಾಗಿದೆ.
ಬೆಕ್ಕಿನ ಮರಿಯ ಬೆನ್ನಿನಲ್ಲಿ 235 ಗ್ರಾಂ ಗಾಂಜಾ ಬಂಡಲ್‌ಗಳು, 68 ಗ್ರಾಂ ಕ್ರ್ಯಾಕ್ ಪೇಸ್ಟ್ ಮತ್ತು ಸ್ವಲ್ಪ ಪ್ರಮಾಣದ ರೋಲಿಂಗ್ ಪೇಪರ್‌ಗಳು ಪತ್ತೆಯಾಗಿದೆ. ಬಂಧಿತ ನಾರ್ಕೊ ಬೆಕ್ಕನ್ನು ಕೋಸ್ಟರಿಕಾದ ರಾಷ್ಟ್ರೀಯ ಪ್ರಾಣಿ ಆರೋಗ್ಯ ಸೇವಾ ಸಂಸ್ಥೆಗೆ ಹಸ್ತಾಂತರಿಸಲಾಯಿತು. ಬೆಕ್ಕು ಹಲವು ದಿನಗಳಿಂದ ಇದೇ ರೀತಿ ಸಂಚರಿಸುತ್ತಿತ್ತು ಎಂದು ಹೇಳಲಾಗಿದೆ.
ನಾರ್ಕೋ ಬೆಕ್ಕುಗಳು ಮನುಷ್ಯನ ಭಾವನೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಪ್ರಾಣಿಗಳಾಗಿದ್ದು, ಅವುಗಳಿಗೆ ತರಬೇತಿ ನೀಡಿದರೆ ಪಾರಿವಾಳದಂತೆ ಸಣ್ಣಪುಟ್ಟ ವಸ್ತುಗಳನ್ನು ಸಾಗಿಸಬಹುದು. ಅಂದಹಾಗೆ ಈ ಬೆಕ್ಕಿಗೆ ತರಬೇತಿ ನೀಡಿ ಮಾದಕ ವಸ್ತು ಕಟ್ಟಿದ್ದು ಯಾರೆಂದು ತಿಳಿಯಲು ಕೋಸ್ಟರಿಕಾ ಪೊಲೀಸರು ಮುಂದಾಗಿದ್ದಾರೆ. ಹೀಗಾಗಿ ಜೈಲಿನ ಖೈದಿಗಳ ತೀವ್ರ ವಿಚಾರಣೆ ನಡೆಯುತ್ತಿದೆ.
ಕೊಸ್ಟರಿಕಾ ಪೊಲೀಸರು ಇದರ ವಿಡಿಯೋವನ್ನು ಇನ್ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ಹಾಕಿದ್ದು, ಭಾರೀ ವೈರಲ್ ಆಗಿದೆ.