ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಇದೀಗ ಮಂಗಳೂರಿನ ನಿವಾಸಿ ಸೇರಿ ಇಬ್ಬರು ಬಲಿಯಾಗಿದ್ದಾರೆ. ಮಳೆ ಆರ್ಭಟ ಜೋರಾಗಿದ್ದು, ಬೆಂಗಳೂರಿನಲ್ಲಿ ಇದುವರೆಗೆ ಮೂರು ಮಂದಿ ಬಲಿಯಾಗಿದ್ದಾರೆ.
ಬೆಂಗಳೂರಿನ ಬಿಟಿಎಂ ಲೇಔಟ್ ಎರಡನೇ ಹಂತದ ಎನ್.ಎಸ್. ಪಾಳ್ಯದಲ್ಲಿ ಮಂಗಳೂರು ಮೂಲದ ಮನಮೋಹನ್ ಕಾಮತ್(63) ಹಾಗೂ ಹಾಗೂ ನೇಪಾಳ ಮೂಲದ ದಿನೇಶ್ (12) ಬೆಂಗಳೂರಿನಲ್ಲಿ ದುರಂತ ಅಂತ್ಯ ಕಂಡವರು.
ಅಪಾರ್ಟ್ ಮೆಂಟ್‌ನ ಬೇಸ್ಮೆಂಟ್ ನಲ್ಲಿ ಮೋಟಾರ್ ನಿಂದ ಮಳೆಯ ನೀರು ಹೊರ ಹಾಕಲು ಹೋಗಿ ಕರೆಂಟ್ ಶಾಕ್ ನಿಂದ 12 ವರ್ಷದ ಬಾಲಕ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಮನಮೋಹನ್ ಕಾಮತ್(63) ಹಾಗೂ ದಿನೇಶ್ (12) ಎಂಬುದಾಗಿ ಗುರುತಿಸಲಾಗಿದೆ. ಇವರು ಬಿಟಿಎಂ ಲೇಔಟ್ ನ 2ನೇ ಹಂತದಲ್ಲಿರುವಂತ ಎನ್.ಎಸ್. ಪಾಳ್ಯದಲ್ಲಿನ ಮಧುವನ ಅಪಾರ್ಮೆಂಟ್‌ನಲ್ಲಿ ವಾಸಿಸುತ್ತಿದ್ದರೆಂದು ತಿಳಿದುಬಂದಿದೆ.
ಅಪಾರ್ಟ್‌ಮೆಂಟ್ ಬೇಸ್‌ಮೆಂಟ್‌ನಲ್ಲಿ ಮಳೆ ನೀರು ತುಂಬಿತ್ತು. ನಿನ್ನೆ ಸಂಜೆ 6.30ಕ್ಕೆ ಮನಮೋಹನ್ ಕಾಮತ್ ಹಾಗೂ ದಿನೇಶ್ ಮೋಟಾರ್ ಪಂಪಿನ ಮೂಲಕ ಮಳೆ ನೀರು ತೆರವು ಮಾಡಲು ಹೋಗಿದ್ದರು. ನೀರು ತೆರವು ಮಾಡುತ್ತಿದ್ದಂತೆ ಎಲೆಕ್ಟ್ರಿಕ್ ಶಾಕ್ ಹೊಡೆದು ಇಬ್ಬರೂ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಮೈಕೋ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮೃತರ ಕುಟುಂಬಗಳಿಗೆ ಬಿಬಿಎಂಪಿಯಿಂದ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.
ಮೊನ್ನೆ ವೈಟ್ ಫೀಲ್ಡ್ ನಲ್ಲಿ ಮನೆಯ ಗೋಡೆ ಕುಸಿದು ಖಾಸಗಿ ಕಂಪೆನಿಯ ಉದ್ಯೋಗಿ ಶಶಿಕಲಾ ಸಾವನ್ನಪ್ಪಿದ್ದರು. ಮಳೆಯಿಂದಾಗಿ ಬೆಂಗಳೂರಿನಲ್ಲಿ ಮೂವರು ಮೃತಪಟ್ಟಿದ್ದು, ರಾಜ್ಯಾದ್ಯಂತ ಒಟ್ಟು 5 ಮಂದಿ ಬಲಿಯಾಗಿದ್ದಾರೆ.
ಭಾನುವಾರ ರಾತ್ರಿಯಿಂದ ಸೋಮವಾರ ಮುಂಜಾನೆವರೆಗೆ ಸುರಿದ ಭಾರೀ ಮಳೆಗೆ ಬೆಂಗಳೂರು ತತ್ತರಿಸಿ ಹೋಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಬೆಂಗಳೂರಿನ ಕೆಂಗೇರಿ ಭಾಗದಲ್ಲಿ ದಾಖಲೆಯ 132 ಮಿ.ಮೀ. ಮಳೆ ಸುರಿದಿದ್ದು, ನಗರವ್ಯಾಪ್ತಿಯ 50ಕ್ಕೂ ಹೆಚ್ಚಿನ ಬಡಾವಣೆಗಳು ಜಲಾವೃತಗೊಂಡು ಜನರು ಪರದಾಡುವಂತಾಗಿದೆ.