ಅಮರಾವತಿ : ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ದ್ವಾರಪುಡಿ ಗ್ರಾಮದಲ್ಲಿ ಕಾರಿನಲ್ಲೇ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಭಾನುವಾರ ದ್ವಾರಪುಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕಾರು ನಿಲ್ಲಿಸಿ ಲಾಕ್ ಮಾಡುವುದನ್ನೇ ಮರೆತಿದ್ದು, ಅಷ್ಟರಲ್ಲಿ ಅಲ್ಲೇ ಸಮೀಪದಲ್ಲಿ ಆಟವಾಡುತ್ತಿದ್ದ ನಾಲ್ವರು ಮಕ್ಕಳು ಮಳೆಯಿಂದ ತಪ್ಪಿಸಿಕೊಳ್ಳಲು ಪಕ್ಕದಲ್ಲೇ ನಿಲ್ಲಿಸಿದ್ದ ಕಾರನ್ನು ಹತ್ತಿದ್ದಾರೆ. ದುರಾದೃಷ್ಟವಶಾತ್, ಕಾರಿನ ಬಾಗಿಲು ಆಕಸ್ಮಿಕವಾಗಿ ಲಾಕ್ ಆಗಿ, ನಾಲ್ವರು ಮಕ್ಕಳು ಕಾರಿನಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಮಕ್ಕಳಿಗಾಗಿ ಮನೆಯವರು ಸುಮಾರು 3 ಗಂಟೆಗಳ ಕಾಲ ಹುಡುಕಾಟ ನಡೆಸಿದ್ದರು. ಕೊನೆಗೆ ಅಲ್ಲೇ ನಿಲ್ಲಿಸಿದ್ದ ಕಾರನ್ನು ಗಮನಿಸಿದಾಗ ಮಕ್ಕಳು ಕಾರಿನೊಳಗೆ ಸಿಲುಕಿರುವುದು ಪತ್ತೆಯಾಗಿದೆ. ತಕ್ಷಣವೇ ಕಾರಿನ ಗ್ಲಾಸ್ ಒಡೆದು ಮನೆಯವರು ಮಕ್ಕಳನ್ನು ಹೊರೆತೆಗೆದರು. ಅಷ್ಟರಲ್ಲಾಗಲೇ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ್ದರು.
ಕಾರು ಲಾಕ್ ಮಾಡದೇ ತೆರಳಿದರೆ ಎಂಥಹ ಅನಾಹುತ ಸಂಭವಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಪ್ರತ್ಯಕ್ಷ ಉದಾಹರಣೆಯಾಗಿದೆ. ಇದೀಗ ಯಾರದೋ ನಿರ್ಲಕ್ಷ್ಯಕ್ಕೆ ಅಮಾಯಕ ಮಕ್ಕಳು ಬಲಿಯಾಗಿದ್ದಾರೆ.