ಬೆಂಗಳೂರು: ದಿಢೀರ್ ಸುರಿದ ಒಂದೇ ಮಳೆಯಿಂದಾಗಿ ಬೆಂಗಳೂರು ಹೊಳೆಯಂತಾಗಿದೆ. ಮಳೆಯಿಂದಾಗಿ ಕಂಪೌಂಡ್ ಗೋಡೆ ಕುಸಿದು ಮಹಿಳೆಯೋರ್ವರು ಮೃತಪಟ್ಟಿದ್ದು, ಇವರ ಕುಟುಂಬಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಅಬ್ಬರದ ಮಳೆಯಿಂದಾಗಿ ವಿಧಾನಸೌಧ, ಕೆ.ಆರ್. ಸರ್ಕಲ್, ಮೆಜೆಸ್ಟಿಕ್, ಕಾರ್ಪೊರೇಷನ್ ಸರ್ಕಲ್, ಕೆ.ಆರ್ ಮಾರ್ಕೆಟ್ ಬಳಿ ವಾಹನ ಸಂಚಾರ ಅಸ್ತವ್ಯಸ್ಥವಾಗಿದೆ. ಯಲಹಂಕ ಸುತ್ತಮುತ್ತ ಮಳೆ ಅಬ್ಬರ ಜೋರಾಗಿದೆ. ಹೀಗೆಯೇ ಮುಂದುವರಿದರೆ ಬೆಂಗಳೂರು ಕಡಲಾಗುವ ಸಾಧ್ಯತೆ ಇದೆ. ಯಾಕೆಂದರೆ ಬೆಂಗಳೂರಿನ ರಾಜಕಾಲುವೆಗಳು ಒತ್ತುವರಿಯಾಗಿದ್ದು, ನೀರು ಸರಿದು ಹೋಗಲು ಸ್ಥಳವಿಲ್ಲ.
ಮಹಿಳೆ ಸಾವು:
ಮಹದೇವಪುರದ ಚನ್ನಸಂದ್ರದಲ್ಲಿ ಭಾರೀ ಮಳೆಯಿಂದಾಗಿ ನೆನೆದಿದ್ದ ಕಾಂಪೌಂಡ್ ಗೋಡೆ ಕುಸಿದು ಶಶಿಕಲಾ(35) ಎಂಬವರು ಮೃತಪಟ್ಟಿದ್ದಾರೆ.
ಯಾದಗಿರಿ ಜಿಲ್ಲೆ ಶಹಾಪುರ ಮೂಲದವರಾದ ಶಶಿಕಲಾ, ಬೆಂಗಳೂರಿನ ಐ ಝಡ್ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ಹೋಗಿದ್ದರು. ಶಶಿಕಲಾ ಅವರಿಗೆ ಇಬ್ಬರು ಚಿಕ್ಕ ಮಕ್ಕಳು ಇದ್ದಾರೆ. ಗಂಡ ಕೂಲಿ ಕೆಲಸ ಮಾಡುತ್ತಾ ಇದ್ದಾರೆ.
ಘಟನಾ ಸ್ಥಳಕ್ಕೆ ಮಹದೇವಪುರ ಪೊಲೀಸರು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮೃತ ಶಶಿಕಲಾ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.