ಝಬುವಾ: ಹಲ್ಲು ನೋವು ಶಮನ ಮಾಡಲೆಂದು ಮೆಡಿಕಲ್ ಸ್ಟೋರ್‌ನಿಂದ ತೆಗೆದುಕೊಂಡ ಟ್ಯಾಬ್ಲೆಟ್ ಸೇವಿಸಿ 32 ವರ್ಷದ ಮಹಿಳೆಯೋರ್ವರು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿ ಸಂಭವಿಸಿದೆ. ಧರಂಪುರಿ ಗ್ರಾಮದವರಾದ ರೇಖಾ ಮೃತ ದುರ್ದೈವಿ.
ಪ್ರಕರಣಕ್ಕೆ ಸಂಬಂಧಿಸಿ ಮೆಡಿಕಲ್ ಸ್ಟೋರ್ ಮಾಲಕನನ್ನು ಬಂಧಿಸಲಾಗಿದ್ದು, ಈತನ ಮೇಲೆ ಸೆಕ್ಷನ್ 105 (ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆ) ಪ್ರಕರಣ ದಾಖಲಿಸಲಾಗಿದೆ ಎಂದು ಝಬುವಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಾ ವಿಲೋಚನ್ ಶುಕ್ಲಾ ಪಿಟಿಐಗೆ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರ ಕಚೇರಿಯಿಂದ ಸುಮಾರು 3 ಕಿಮೀ ದೂರದಲ್ಲಿರುವ ಧರಂಪುರಿ ಗ್ರಾಮದ ರೇಖಾ ಗುರುವಾರ ಸಂಜೆ ಥಾಂಡ್ಲಾ ಗೇಟ್ ಬಳಿಯ ಮೆಡಿಕಲ್ ಸ್ಟೋರ್‌ಗೆ ಹೋಗಿ ಹಲ್ಲುನೋವಿಗೆ ಔಷಧಿ ಕೇಳಿದರು. ಮೆಡಿಕಲ್ ಸ್ಟೋರ್‌ನಲ್ಲಿದ್ದವ ಆಕೆಗೆ ಸಲ್ಫಾಸ್ ಟ್ಯಾಬ್ಲೆಟ್ ನೀಡಿದ್ದಾನೆ. ಅದನ್ನು ರೇಖಾ ಅಂದು ರಾತ್ರಿ ಮನೆಯಲ್ಲಿ ಸೇವಿಸಿದ್ದು, ಆ ಬಳಿಕ ಅವರ ಆರೋಗ್ಯ ಹದಗೆಟ್ಟಿತು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ನಿಧನರಾದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಕುಟುಂಬದವರು ಶುಕ್ರವಾರ ಪೊಲೀಸರಿಗೆ ಮಾಹಿತಿ ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಮಹಿಳೆ ಸಲ್ಫಾ ಸೇವನೆಯಿಂದ ಸಾವು ಸಂಭವಿಸಿದೆ ಎಂದು ದೃಢಪಡಿಸಿದ ನಂತರ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಅಂಗಡಿಯ ಮಾಲೀಕ ಲೋಕೇಂದ್ರ ಬಾಬೆಲ್ (52) ಅವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಸಲ್ಫಾ ಮಾತ್ರೆಗಳನ್ನು ಅಂಗಡಿಯಲ್ಲಿ ಏಕೆ ಇಡಲಾಗಿದೆ ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಹೇಳಿದರು, ಮೆಡಿಕಲನ್ನು ಸೀಲ್ ಮಾಡಲಾಗಿದೆ ಮತ್ತು ಔಷಧ ನಿಯಂತ್ರಣ ಇಲಾಖೆಯೂ ತನಿಖೆಯಲ್ಲಿ ಭಾಗಿಯಾಗಿದೆ. ಮಹಿಳೆಗೆ ಟ್ಯಾಬ್ಲೆಟ್ ನೀಡಿದ ಮಾರಾಟಗಾರನಿಗಾಗಿ ಶೋಧ ನಡೆಯುತ್ತಿದೆ ಎಂದು ಎಸ್‌ಪಿ ಹೇಳಿದ್ದಾರೆ.