ಕಾಸರಗೋಡು: ಹದಿನೆಂಟು ವರ್ಷದ ದಲಿತ ಹುಡುಗಿಯ ಜೊತೆ ನಾಪತ್ತೆಯಾಗಿ ಆಕೆಯೊಂದಿಗೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಮದುವೆಯಾಗಿ ಮಕ್ಕಳಿರುವ ಆರೋಪಿ ಬಿಜು ಪೌಲೋಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪಣತ್ತೂರಿನ ಬಪ್ಪುಂಕಯಂ ನಿವಾಸಿ, ಸಿವಿಲ್ ಕಾಂಟ್ರಾಕ್ಟರ್ ಆಗಿರುವ ಪೌಲೋಸ್ ನನ್ನು ಶುಕ್ರವಾರ ರಾತ್ರಿ ವಯನಾಡಿನಲ್ಲಿ ಅಪರಾಧ ವಿಭಾಗದ ಐಜಿ ಪಿ. ಪ್ರಕಾಶ್ ನೇತೃತ್ವದ ವಿಶೇಷ ತನಿಖಾ ತಂಡ ಬಂಧಿಸಿದೆ. ಯುವತಿ 10 ನೇ ತರಗತಿಯಲ್ಲಿದ್ದಾಗಿನಿಂದ ಆಕೆಯೊಂದಿಗೆ ಈತ ಲಿವ್-ಇನ್ ಸಂಬಂಧ ಹೊಂದಿದ್ದ ಎಂದು ಆರೋಪಿಸಲಾಗಿದ್ದು, ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಲಾಗಿದೆ.
ಹುಡುಗಿ ಜನವರಿ 2011 ರಲ್ಲಿ ಕಾಣೆಯಾಗಿದ್ದಳು. ಉದ್ಯೋಗ ಕೊಡಿಸುವ ಭರವಸೆ ನೀಡಿ, ಆಕೆಯನ್ನು ದೈಹಿಕವಾಗಿ ಅಪಹರಿಸಿದ್ದಾನೆ ಎಂದು ಆಕೆಯ ಕುಟುಂಬ ಮತ್ತು ದಲಿತ ಸಂಘಟನೆಗಳು ಆರೋಪಿಸಿವೆ.
ಪೌಲೋಸ್ ಕೃತ್ಯಕ್ಕೆ ಮಮ್ಮಿ ಅಲಿಯಾಸ್ ಎಲಿಯಮ್ಮ ಎಂಬ ಮಹಿಳೆ ಸಹಕಾರ ನೀಡಿದ್ದಾಳೆ ಎಂದು ಎಂದು ಕೇರಳ ರಾಜ್ಯ ದಲಿತ ಸಮಾಜಂ ಹೇಳಿಕೊಂಡಿದೆ. ಪೌಲೋಸ್ ಮತ್ತು ಹುಡುಗಿ ಕಾಞಂಗಾಡ್ ಹೊರವಲಯದಲ್ಲಿರುವ ಮಡಿಯನ್‌ನಲ್ಲಿ ಎಲಿಯಮ್ಮಳ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ವರದಿಯಾಗಿದೆ. ಪೌಲೋಸ್ ಗೆ ಮದುವೆಯಾಗಿ ಮಕ್ಕಳಿದ್ದರೂ, ಆತ ಈ ವಿಷಯವನ್ನು ಹುಡುಗಿಯಿಂದ ಮರೆಮಾಡಿದ್ದಾನೆ ಎನ್ನಲಾಗಿದೆ.
ಆರಂಭದಲ್ಲಿ ಅಂಬಲತ್ತರ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು, ಆನಂತರ ತನಿಖೆಯನ್ನು ಬೇಕಲ್ ಪೊಲೀಸರಿಗೆ ವರ್ಗಾಯಿಸಲಾಯಿತು. ಪದೇ ಪದೇ ವಿಚಾರಣೆ ನಡೆಸಿದರೂ ಪೌಲೋಸ್‌ನನ್ನು ಬಂಧಿಸಲಾಗಿಲ್ಲ. ಹೈಕೋರ್ಟ್ ನಿರ್ದೇಶನದ ಮೇರೆಗೆ ಪ್ರಕರಣವನ್ನು ಅಂತಿಮವಾಗಿ ಕ್ರೈಂ ಬ್ರಾಂಚ್‌ಗೆ ಹಸ್ತಾಂತರಿಸಲಾಯಿತು.
ಐಜಿ ಪ್ರಕಾಶ್ ಕಾಸರಗೋಡಿನಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡುವ ನಿರೀಕ್ಷೆಯಿದೆ. ತನಿಖಾ ತಂಡದಲ್ಲಿ ಎಸ್ಪಿ ಪ್ರಜೀಶ್ ತೊಟ್ಟತಿಲ್, ಡಿವೈಎಸ್ಪಿ ಪಿ. ಮಧುಸೂದನನ್ ನಾಯರ್, ಎಸ್ಐ ರಘು, ಎಎಸ್ಐ ರಥಿ, ಮತ್ತು ಅಧಿಕಾರಿಗಳಾದ ಸುಮೇಶ್, ಮಹೇಶ್, ಪ್ರಬೇಶ್, ಲತೀಶ್ ಮತ್ತು ಶ್ರೀಜಿತ್ ಇದ್ದರು.