ಮಂಗಳೂರು: ಫನ್ನೀರ್‌ನ ಲುಲು ಸೆಂಟರ್‌ನಲ್ಲಿ 2005 ಫೆಬ್ರವರಿಯಲ್ಲಿ ಆರಂಭಗೊಂಡ ದಾರುಲ್ ಇಲ್ಮ್ ಮದ್ರಸ ತನ್ನ 20ನೇ ವರ್ಷವನ್ನು ಆಚರಿಸುವ ಸುಸಂದರ್ಭದಲ್ಲಿ ಅದರ ಹಳೆಯ ಕಟ್ಟಡವನ್ನು ನವೀಕರಿಸಿ, ನಾಳೆ ಮೇ17ರಂದು ಅದರ ನವೀಕೃತ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಾರುಲ್ ಇಲ್ಮ್ ಸ್ಥಾಪಕ ರಫೀಉದ್ದೀನ್ ಕುದ್ರೋಳಿ ಹೇಳಿದರು.
ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿ, ಮದ್ರಸ ಹಾಗು ಮಸೀದಿಗಳು ಮುಸ್ಲಿಮರ ಆಧ್ಯಾತ್ಮಿಕ ಕೇಂದ್ರಗಳಾಗಿವೆ. ಅಲ್ಲಿ ಅವರು ಧಾರ್ಮಿಕ ವಿದ್ಯೆಯನ್ನು ಗಳಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಅಲ್ಲಾಹನ ದಿವ್ಯ ಗ್ರಂಥ ಖುರ್ ಆನ್ ಮತ್ತು ಪ್ರವಾದಿವರ್ಯ (ಸ) ರ ವಚನಗಳಾದ ಹದೀಸ್ ಗಳ ಕುರಿತು ಆಳವಾದ ಜ್ಞಾನವನ್ನು ಗಳಿಸುತ್ತಾರೆ. ಅದು ಅವರ ಪ್ರಮುಖ ಕೇಂದ್ರಗಳಾಗಿವೆ ಎಂದರು.
2005ಕ್ಕಿಂತ ಮೊದಲು ಫನ್ನೀರ್ ಪ್ರದೇಶದಲ್ಲಿ ಅಧಿಕೃತವಾದ ಯಾವುದೇ ಮದ್ರಸ ಇರಲಿಲ್ಲ ಆ ಕೊರತೆಯನ್ನು ನೀಗಿಸಲು ನಾವು ಅಲ್ಲಿ ಒಂದು ಮದ್ರಸವನ್ನು ಸ್ಥಾಪಿಸಿದ್ದೆವು. ಈಗ ಅದಕ್ಕೆ 20 ವರ್ಷಗಳು. ಇಂದು ಮದ್ರಸಗಳ ಕುರಿತು ಅನೇಕ ರೀತಿಯ ಆರೋಪಗಳು ಹೇಳಿಕೆಗಳು ಕೇಳಿ ಬರುವ ಸಂದರ್ಭದಲ್ಲಿ ದಾರುಲ್ ಇಲ್ಮ್ ಮದ್ರಸ ಅದಕ್ಕೆ ಅಪವಾದ ಎಂಬಂತೆ ಬಹಳ ಮುಕ್ತ ಹಾಗು ಸ್ಪಟಿಕ ದಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ರಫೀಉದ್ದೀನ್ ಕುದ್ರೋಳಿ ಹೇಳಿದರು.
ಪ್ರತಿಯೊಬ್ಬರಿಗೂ ಕಲಿಯುವ ಅವಕಾಶವಿರುವ ಹಾಗು ಯಾರಿಗೂ ಯಾವಾಗ ಬೇಕಾದರೂ ಸಂದರ್ಶಿಸಲು ಅವಕಾಶವಿರುವ ಒಂದು ಮದ್ರಸವಾಗಿದೆ. ದಾರುಲ್ ಇಲ್ಮ್ ಅರಬಿ ಭಾಷೆ ಎಂಬುದೊಂದು ಅಂತಾರಾಷ್ಟ್ರೀಯ ಭಾಷೆಯಾಗಿದೆ. ಅದನ್ನು ಯಾರೂ ಕಲಿಯಬಹುದು. ಅನೇಕರು ಬಯಸಿಯೂ ಅದನ್ನು ಕಲಿಯಲಾರದ ಪರಿಸ್ಥಿತಿಯಲ್ಲಿ ದಾರುಲ್ ಇಲ್ಲ್ ಅಂತಹವರಿಗೆ ಅವಕಾಶ ಮಾಡಿ ಕೊಟ್ಟಿದೆ. ಈ ಮೊದಲು ವಿವಿಧ ಧರ್ಮೀಯರಿಗೆ ಅರಬಿ ಭಾಷೆ ಕಲಿಯುವ ಕೋರ್ಸ್ ಅನ್ನು ಆರಂಭಿಸಲಾಗಿತ್ತು.
ಈಗಲೂ ಯಾರಾದರೂ ಉರ್ದು ಮತ್ತು ಅರಬಿ ಭಾಷೆ ಕಲಿಯ ಬಯಸಿದರೆ, ಭಾಷೆಯ ಹಾಗು ಧರ್ಮದ ಬೇಧ ಭಾವ ಗಳಿಲ್ಲದೆ ಇಲ್ಲಿ ಕಲಿಯಬಹುದು. ಅದೇ ರೀತಿ ಇಸ್ಲಾಮಿನ ಕುರಿತು ತಪ್ಪು ಗ್ರಹಿಕೆಗಳು ಯಾರಿಗಾದರೂ ಇದ್ದರೆ ಇಲ್ಲಿ ಬಂದು ಅದನ್ನು ನೀಗಿಸುವ ಅವಕಾಶ ಕೂಡ ಇದೆ. ಈ ಮದ್ರಸ ದಲ್ಲಿ ಕೇವಲ ಮಕ್ಕಳಿಗೆ ಮಾತ್ರ ವಿದ್ಯಾಭ್ಯಾಸ ನೀಡುವುದಲ್ಲ ಬದಲಾಗಿ ಹಿರಿಯರಿಗೂ ಮಹಿಳೆಯರಿಗೂ ಪ್ರತಿಯೊಬ್ಬರಿಗೂ ವಯಸ್ಸಿನ ಮಿತಿಯಿಲ್ಲದೆ ಕಲಿಯುವ ಅವಕಾಶವನ್ನು ಕಲ್ಪಿಸಲಾಗಿದೆ ಹಾಗು ಕಲಿಯುತ್ತಿದ್ದಾರೆ.
ಇದಕ್ಕೆ ಈ ಕಾಲದ ಒಂದು ಆಧುನಿಕ ಮದ್ರಸ ಎಂಬ ಹೆಗ್ಗಳಿಕೆ ಇದೆ. ಇದು ಕರಾವಳಿ ಕರ್ನಾಟಕದ ಪ್ರಥಮ ಅಂಗ್ಲೋ ಅರಬಿಕ್ ಮದ್ರಸವೂ ಆಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಾಪಕ ಮುಹಮ್ಮದ್ ಸೈಫುದ್ದೀನ್, ಮುಹಮ್ಮದ್ ಆಸಿಫ್, ಶೇಖ್ ಅಹ್ಮದ್, ಅಬೂಬಕ್ಕರ್ ಉಪಸ್ಥಿತರಿದ್ದರು.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ