ಮಂಗಳೂರು: ರೈಲಿನಲ್ಲಿ ಸೀಟಿಗಾಗಿ ಇಬ್ಬರು ಪ್ರಯಾಣಿಕರು ಪರಸ್ಪರ ಕಿತ್ತಾಟ ನಡೆಸಿ, ಕುಪಿತಗೊಂಡ ಮತ್ತೋರ್ವ ರೈಲಿನ ಸರಪಳಿ ಎಳೆದು ದಂಡ ಕಟ್ಟಿಸಿಕೊಂಡ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಹೊರಟ ರೈಲು ಬಂಟ್ವಾಳಕ್ಕೆ ತಲುಪಿದಾಗ ಪ್ರಯಾಣಿಕರಿಬ್ಬರು ಸೀಟಿಗಾಗಿ ಕಿತ್ತಾಡ ನಡೆಸಿದ್ದಾರೆ. ಇವರ ಜಗಳವನ್ನು ಇತರ ಪ್ರಯಾಣಿಕರ್ಯಾರೂ ನಿಲ್ಲಿಸಲು ಮುಂದಾಗದೆ ಚಂದ ನೋಡುತ್ತಿದ್ದರು. ಸೀಟು ಕೊಡದಿದ್ದರೆ ನಾನು ರೈಲನ್ನೇ ನಿಲ್ಲಿಸಿಬಿಡುತ್ತೇನೆ ಎಂಬ ಜಿದ್ದಿಗೆ ಬಿದ್ದ ಪ್ರಯಾಣಿಕ ರೈಲಿನ ತುರ್ತು ಸರಪಳಿ ಎಳೆದು ನಿಲ್ಲಿಸಿಯೇ ಬಿಟ್ಟಿದ್ದಾನೆ.
ಅರೆ ರೈಲ್ಯಾಕೆ ನಿಂತಿತು ಎಂದು ಓಡೋಡಿ ಬಂದ ರೈಲ್ವೆ ಪೊಲೀಸರ ಮುಂದೆ ಸೀಟಿಗಾಗಿ ಜಗಳ ಕಾಯುತ್ತಿದ್ದ ಯುವಕರು ಕಂಡಿದ್ದಾರೆ. ನಿಮ್ಮಲ್ಲಿ ರೈಲು ನಿಲ್ಲಿಸಿದವರು ಯಾರು ಎಂದು ಪ್ರಶ್ನಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ರೈಲು ಮಂಗಳೂರು ಜಂಕ್ಷನ್ ತಲುಪಿದ ನಂತರ, ಆರ್‌ಪಿಎಫ್ ಅಧಿಕಾರಿಗಳು ಸರಪಳಿ ಎಳೆದ ವ್ಯಕ್ತಿಯನ್ನು ಗುರುತಿಸಿ, ವಿಚಾರಣೆ ನಡೆಸಿ, 1,500 ರೂ. ದಂಡ ವಿಧಿಸಿ, ಇಂತಹ ಕೃತ್ಯಗಳನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಿದರು. ರೈಲು ಬಂಟ್ವಾಳದಿಂದ ಮಂಗಳೂರಿಗೆ ಬರಲು ಹೆಚ್ಚೆಂದರೆ ಅರ್ಧ ಗಂಟೆ ಇತ್ತು. ಅಲ್ಲಿಯವರೆಗೆ ನೆಮ್ಮದಿಯಾಗಿ ನಿಂತು ಪ್ರಯಾಣಿಸುತ್ತಿದ್ದರೆ ಇವನ 1500 ಇವನಲ್ಲಿಯೇ ಉಳಿದುಕೊಳ್ಳುತ್ತಿತ್ತು ಎಂದು ಇತರ ಪ್ರಯಾಣಿಕರು ನೆಗಾಡಿದ್ದಾರೆ.