ಕಾಸರಗೋಡು: ಆಲಪ್ಪುಳದ ತಲವಾಡಿ ಎಂಬಲ್ಲಿ 48 ವರ್ಷದ ವ್ಯಕ್ತಿಯ ರಕ್ತದ ಮಾದರಿಯಲ್ಲಿ ಕಾಲರಾ ಪಾಸಿಟಿವ್ ಪತ್ತೆಯಾಗಿದ್ದು, ಸ್ಥಳದಲ್ಲಿ ಪಂಚಾಯತ್ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ತೀವ್ರ ಹೈ ಅಲರ್ಟ್ ಘೋಷಿಸಿಕೊಂಡಿದೆ.
ಕೇರಳದಲ್ಲಿ 2025 ರಲ್ಲಿ ಕಾಲಾರದಿಂದ ಒಬ್ಬ ಮೃತಪಟ್ಟಿದ್ದು, ಕಳೆದ ಹತ್ತು ವರ್ಷಗಳಲ್ಲಿ ಮೂರನೇ ಸಾವಾಗಿದೆ. ವಿಶ್ವದಲ್ಲಿ ಕಾಲರಾ ನಾಮವಶೇಷಗೊಂಡಿದೆ ಎನ್ನುತ್ತಿರುವಾಗಲೇ ಇದೀಗ ಕೇರಳದಲ್ಲಿ ಕಾಣಿಸಿಕೊಂಡಿರುವವುದು ಆತಂಕಕ್ಕೆ ಕಾರಣವಾಗಿದೆ.
ಕಾಲರಾ ದೃಢವಾದ ನಂತರ ತಲವಾಡಿ ಪಂಚಾಯತ್ ಬುಧವಾರ ತುರ್ತು ಸಭೆ ನಡೆಸಲಿದೆ. “ರಕ್ತದ ಮಾದರಿಗಳಲ್ಲಿ ಕಾಲರಾ ಪಾಸಿಟಿವ್ ಬಂದಿದೆ ಎಂದು ಆಸ್ಪತ್ರೆ ಅಧಿಕಾರಿಗಳು ವರದಿ ಮಾಡಿದ್ದಾರೆ. ಅವರು ಮಲ ಮಾದರಿಗಳ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ತಡೆಗಟ್ಟುವ ಕ್ರಮಗಳನ್ನು ಪ್ರಾರಂಭಿಸಿದ್ದೇವೆ” ಎಂದು ತಲವಾಡಿ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಬಿ ನಾಯರ್ ಹೇಳಿದರು.
ರೋಗಿಗೆ ಇತರ ಆರೋಗ್ಯ ಕಾಯಿಲೆಗಳು ಮತ್ತು ಯಕೃತ್ತಿನ ಕಾಯಿಲೆ ಇದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾ ವೈದ್ಯಾಧಿಕಾರಿ (DMO) ಮಂಗಳವಾರ ಪಂಚಾಯತ್‌ನಲ್ಲಿ ಸಭೆ ಕರೆದರು. ಕಾಲರಾಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾವಾದ ʻವಿಬ್ರಿಯೊ ಕೊಲೆರೇಯʼ ತಳಿಗಳನ್ನು ರಕ್ತದಲ್ಲಿ ಕಂಡುಹಿಡಿಯುವುದು ಸವಾಲಿನ ಕೆಲಸವಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. “ಸಾಮಾನ್ಯವಾಗಿ, ಕಾಲರಾ ಮಲದಲ್ಲಿ ಕಂಡುಬರುತ್ತದೆ; ಅದು ಕರುಳಿನಲ್ಲಿ ಹುಣ್ಣುಗಳ ಮೂಲಕ ರಕ್ತಕ್ಕೆ ಪ್ರವೇಶಿಸಿರಬಹುದು, ಆದರೆ ಇದನ್ನು ದೃಢೀಕರಿಸಬೇಕಾಗಿದೆ” ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಂಚಾಯತ್ ಅಧಿಕಾರಿಗಳು ನೀರಿನ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಿದ್ದಾರೆ. ಬೇಸಿಗೆಯಲ್ಲಿ, ತಲವಾಡಿಯ ದಕ್ಷಿಣದ ಸ್ಥಳಗಳಿಗೆ ವಿವಿಧ ನೀರಿನ ಮೂಲಗಳಿಂದ ನೀರನ್ನು ವಿತರಿಸಲಾಗುತ್ತಿದೆ. ಇದು ಆತಂಕಕ್ಕೆ ಕಾರಣವಾಗಿದೆ.
ಒಬ್ಬ ಸಾವು:
ತಿರುವನಂತಪುರಂ ಕೌಡಿಯಾರ್ ನಿವಾಸಿ ಅಜಯ್ಚಂದ್ರನ್(63) ಎಂಬ ವ್ಯಕ್ತಿಗೆ ಏಪ್ರಿಲ್‌ನಲ್ಲಿ ಕಾಲರಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇವರು ಏಪ್ರಿಲ್ 20 ರಂದು ನಿಧನರಾದರು. ಈ ರೋಗಿಗೆ ಇತರ ಆರೋಗ್ಯ ಕಾಯಿಲೆಗಳೂ ಇದ್ದವು. ಎರಡೂ ರೋಗಿಗಳ ಕುಟುಂಬ ಸದಸ್ಯರು ಯಾವುದೇ ಲಕ್ಷಣಗಳನ್ನು ತೋರಿಸಲಿಲ್ಲ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ಯಾಕ್ಟೀರಿಯಾದ ತಳಿಯನ್ನು ಪತ್ತೆಹಚ್ಚಲು ಮಾದರಿಗಳನ್ನು ಕೋಲ್ಕತ್ತಾದ ರಾಷ್ಟ್ರೀಯ ಕಾಲರಾ ಮತ್ತು ಎಂಟರಿಕ್ ರೋಗಗಳ ಸಂಸ್ಥೆಗೆ (NICED) ಕಳುಹಿಸಲು ತೀರ್ಮಾನಿಸಲಾಗಿದೆ.