ಮಾತು ಬಾರದ, ಕಿವಿ ಕೇಳದ ಬಾಲಕಿಯ ರೇಪ್‌ & ಮರ್ಡರ್?:‌ ಮನೆಮುಂದೆ ಶವವಿಟ್ಟು ಪ್ರತಿಭಟನೆ

ಬಿಡದಿ: ಮಾತು ಬಾರದ, ಕಿವಿ ಕೇಳದ ಬಾಲಕಿಯನ್ನು ಅತ್ಯಾಚಾರಗೈದು, ಕೊಲೆ ಮಾಡಿ ಶವವನ್ನು ಭದ್ರಾಪುರ ಬಳಿಯ ರೈಲ್ವೆ ಹಳಿ ಪಕ್ಕ ಎಸೆದ ಘಟನೆ ಮೂರು ದಿನಗಳ ಹಿಂದೆ ನಡೆದಿದೆ. ಇದರಿಂದ ರೊಚ್ಚಿಗೆದ್ದಿರುವ ಬಾಲಕಿಯ ತಾಯಿ ಹಾಗೂ ಕುಟುಂಬಸ್ಥರು, ನನ್ನ ಮಗಳ ಮೇಲೆ ಅತ್ಯಾಚಾರ ಎಸಗಿ, ಚಿತ್ರಹಿಂಸೆ ನೀಡಿ ಕ್ರೂರವಾಗಿ ಕೊಲೆ ಮಾಡಲಾಗಿದೆ. ಹಂತಕರನ್ನು ಪೊಲೀಸರು ಬಂಧಿಸುವವರೆಗೆ ಆಕೆಯ ಶವಸಂಸ್ಕಾರ ಮಾಡುವುದಿಲ್ಲʼ ಎಂದು ಪಟ್ಟು ಹಿಡಿದ್ದಿದ್ದಾರೆ.

ಮೂರು‌ ದಿನಗಳ ಹಿಂದೆ ರೈಲ್ವೆ ಹಳಿ ಪಕ್ಕ ಅರೆ ನಗ್ನಾವಸ್ಥೆಯಲ್ಲಿ ಮಾತು ಬಾರದ ಮತ್ತು ಕಿವಿ ಕೇಳಿಸದ ಹಕ್ಕಿಪಿಕ್ಕಿ ಸಮುದಾಯದ ಬಾಲಕಿಯ ಶವ ಪತ್ತೆಯಾಗಿತ್ತು. ಈಕೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಅವರು, ಗ್ರಾಮಕ್ಕೆ ಬುಧವಾರ ಭೇಟಿ ನೀಡಿದ್ದು, ಕುಟುಂಬದವರು ಮತ್ತು ಗ್ರಾಮಸ್ಥರು ಇವರ ಮುಂದೆ ನೋವು ತೋಡಿಕೊಂಡರು‌.

ತಮ್ಮ ಶೀಟಿನ ಮನೆ ಮುಂದೆ ಮಗಳ ಶವವನ್ನು ಇಟ್ಟುಕೊಂಡು, ಪೊಲೀಸರು ಯಾವಾಗ ಹಂತಕರನ್ನು ಬಂಧಿಸುತ್ತಾರೊ, ಯಾಕಾಗಿ ಪುತ್ರಿಯನ್ನು ಕೊಲೆ ಮಾಡಲಾಗಿದೆ ಎಂಬ ಕಾರಣ ತಿಳಿಯಲು ಅನ್ನ, ನೀರು ಹಾಗೂ ನಿದ್ರೆ ಬಿಟ್ಟು ಕುಟುಂಬ ಕಾಯುತ್ತಿದೆ. ಅದಾಗಲೇ ಊದಿಕೊಂಡಿರುವ ಶವದ ದುರ್ನಾತ ಲೆಕ್ಕಿಸದೆ, ಶವದ ಎದುರು ಬೆಂಕಿ ಹಚ್ಚಿ ರಾತ್ರಿಯಿಡೀ ಬಾಲಕಿ ಮನೆ ಬಳಿ ಕಾವಲು ಕುಳಿತ ಊರಿನವರು ಸಹ ತಮ್ಮೂರ ಹುಡುಗಿಯ ಅನ್ಯಾಯದ ಸಾವಿಗೆ ವಿಧಿಯನ್ನು ಶಪಿಸುತ್ತಾ, ನ್ಯಾಯದ ನಿರೀಕ್ಷೆಯಲ್ಲಿದ್ದಾರೆ.

ಪೊಲೀಸರು, ಅಧಿಕಾರಿಗಳು, ರಾಜಕಾರಣಿಗಳು, ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು, ಮಾಧ್ಯಮದವರು ಸೇರಿದಂತೆ ಯಾರೇ ಊರಿಗೆ ಹೋದರೂ, ‘ನಮ್ಮೂರ ಹುಡುಗಿ ಸಾವಿಗೆ ನ್ಯಾಯ ಕೊಡಿಸಿ ಸಾರ್…’ ಎಂದು ಕುಟುಂಬದವರು ಹಾಗೂ ಊರಿನವರು ಅಂಗಲಾಚುತ್ತಿದ್ದಾರೆ.

ಮಗಳ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳಿದರೂ ಪೊಲೀಸರು ನಂಬುತ್ತಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದರೆ ಗೊತ್ತಾಗುತ್ತದೆ ಎನ್ನುತ್ತಿದ್ದಾರೆ‌. ಆದರೆ, ನಿನ್ನೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರೂ, ಇನ್ನೂ ವರದಿ ಸಿಕ್ಕಿಲ್ಲ ಎನ್ನುತ್ತಿದ್ದಾರೆ‌. ವರದಿ ಬಂದು ಯಾವ ರೀತಿ ಕೊಲೆ ಮಾಡಿದ್ದಾರೆ? ಅತ್ಯಾಚಾರ ಆಗಿದೆಯೇ ಇಲ್ಲವೊ ಎಂದು ಖಚಿತವಾಗಿ ಹೇಳುವವರೆಗೆ ನಾವು ಮಗಳನ್ನು ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು.

error: Content is protected !!