ನವದೆಹಲಿ: ಆಪರೇಷನ್ ಸಿಂಧೂರ್(Operation Sindoor) ಇನ್ನೂ ಮುಗಿದಿಲ್ಲ ಎಂದು ಭಾರತದ ಸೇನೆ ಘೋಷಣೆ ಮಾಡಿದ ಬೆನ್ನಲ್ಲೇ ಇದೀಗ ‘ಆಪರೇಷನ್ ಕೆಲ್ಲರ್’(Operation Keller) ಶುರುಮಾಡಿದೆ. ಭಯೋತ್ಪಾದನೆ ವಿರುದ್ಧ ಮಾಡುವ ಹೋರಾಟಕ್ಕೆ ಈ ಹೆಸರನ್ನು ಇಡಲಾಗಿದೆ.
ನಿನ್ನೆ ಭಾರತೀಯ ಸೇನೆಯು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಕೆಲ್ಲರ್ ದಡ್ಡ ಅರಣ್ಯ ಪ್ರದೇಶದಲ್ಲಿ ಲಷ್ಕರ್-ಎ-ತೊಯ್ಬಾದ ಮೂವರು ಉಗ್ರರನ್ನು ಎನ್‌ಕೌಂಟರ್ ಮಾಡಿದ ಬೆನ್ನಲ್ಲೇ ಇದೇ ಪ್ರದೇಶದ ಹೆಸರನ್ನೇ ನಾಮಕರಣ ಮಾಡಲಾಗಿದೆ. ಈ ಹಿಂದೆ ಶೋಕಲ್ ಕೆಲ್ಲರ್ ಪ್ರದೇಶದಲ್ಲಿ ಭಯೋತ್ಪಾದಕರ ಇರುವಿಕೆಯ ಬಗ್ಗೆ ರಾಷ್ಟ್ರೀಯ ರೈಫಲ್ಸ್ ಘಟಕವು ನಿಖರವಾದ ಗುಪ್ತಚರ ಮಾಹಿತಿಯನ್ನು ನೀಡಿತ್ತು. ಅದರ ನಂತರ ಸೇನೆಯು ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಸಾಮಾಜಿಕ ಮಾಧ್ಯಮದಲ್ಲಿ ಸೇನೆಯು ಕಾರ್ಯಾಚರಣೆ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿದೆ. ಪೋಸ್ಟ್ನಲ್ಲಿ ಆಪರೇಷನ್ ಕೆಲ್ಲರ್ ಮೇ 13 2025ರಂದು ರಾಷ್ಟ್ರೀಯ ರೈಫಲ್ಸ್ ಘಟಕದ ನಿರ್ದಿಷ್ಟ ಗುಪ್ತಚರ ಮಾಹಿತಿಯನ್ನು ಆಧರಿಸಿ, ಭಾರತೀಯ ಸೇನೆಯು ಶೋಪಿಯಾನ್‌ನ ಶೋಕಲ್ ಕೆಲ್ಲರ್‌ನಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಎಂದು ಬರೆಯಲಾಗಿದೆ.
ಆಪರೇಷನ್ ಕೆಲ್ಲರ್ ಅಡಿಯಲ್ಲಿ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಹಾಗೂ ಕೊಲ್ಲಲ್ಪಟ್ಟ ಭಯೋತ್ಪಾದಕರ ಬ್ಯಾಗ್‌ಪ್ಯಾಕ್‌ಗಳು ಮತ್ತು ವ್ಯಾಲೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ