ಮಂಗಳೂರು: ಪಟ್ಲ ಸತೀಶ್ ಶೆಟ್ಟಿಯವರ ಮೇಲಿನ ಅಭಿಮಾನದಿಂದ ಮತ್ತು ನಿರಂತರ ಅವರು ಮಾಡುತ್ತಿರುವ ಸಮಾಜ ಸೇವೆಯನ್ನು ನೋಡಿ ಮುಂಬೈ ಉದ್ಯಮಿ, ಸಮಾಜ ಸೇವಕ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಗೆ ಕುಸುಮೋದರ ಡಿ. ಶೆಟ್ಟಿಯವರು 1 ಕೋಟಿ ರೂಪಾಯಿ ದೇಣಿಗೆಯನ್ನು ಘೋಷಿಸಿದ್ದಾರೆ.
ಫೌಂಡೇಶನ್ ನ ಮಹಾದಾನಿ ಗಳಲ್ಲಿ ಓರ್ವರಾಗಿ ಕಲೆ, ಕಲಾವಿದರ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ ಕುಸುಮೋದರ ಶೆಟ್ಟಿ ಮುಂದಾಗಿದ್ದಾರೆ.
ಜನ ಸಾಮಾನ್ಯರ ಕಲ್ಯಾಣಕ್ಕಾಗಿ ತಮ್ಮ ತಾಯಿಯ ಹೆಸರಿನಲ್ಲಿ ಭವಾನಿ ಫೌಂಡೇಶನ್ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಸಾವಿರಾರು ಮಂದಿ ಅಶಕ್ತ ಕುಟುಂಬದ ಬಾಳಿಗೆ ಬೆಳಕಾದವರು. ವೈದ್ಯಕೀಯ ನೆರವು, ವಿಧವ ವೇತನ, ಬಡ ಹೆಣ್ಮಕ್ಕಳ ಮದುವೆಗೆ ನೆರವು, ಶೈಕ್ಷಣಿಕ ನೆರವು, ಅಶಕ್ತರ ಮನೆ ನಿರ್ಮಾಣಕ್ಕೆ ನೆರವು ಸೇರಿದಂತೆ ಪ್ರತೀ ತಿಂಗಳು 50 ಲಕ್ಷ ರೂ. ಗೂ ಅಧಿಕ ಮೊತ್ತವನ್ನು ಸಮಾಜ ಸೇವೆಗಾಗಿ ಮೀಸಲಿಟ್ಟವರು ಕುಸುಮೋದರ ಶೆಟ್ಟಿಯವರು ತಮ್ಮ ಭವಾನಿಗ್ರೂಪ್ ಆಫ್ ಕಂಪೆನಿಯ ಮೂಲಕ ಸಾವಿರಾರು ಮಂದಿಗೆ ಉದ್ಯೋಗವನ್ನು ನೀಡಿದವರು.
ಮಹಾರಾಷ್ಟ್ರ ರಾಯಗಢ ಜಿಲ್ಲೆಯ ಪಿರ್ಕಟ್ವಾಡಿ ಎಂಬ ಬುಡಕಟ್ಟು ಜನಾಂಗದ ಹಳ್ಳಿಯೊಂದನ್ನು ದತ್ತು ಸ್ವೀಕರಿಸಿ ಅಲ್ಲಿ ಶಾಲೆ, ಸಮಾಜ ಭವನ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಹಾರಾಷ್ಟ್ರ ಸರ್ಕಾರದ ಪ್ರಶಂಸೆಗೆ ಒಳಗಾದ ಅವರು ಮುಂಬೈಯ ಅಂಬರ್ನಾಥ್ನಲ್ಲಿ ಕನ್ನಡ ಶಾಲೆಯೊಂದನ್ನು ಸಂಪೂರ್ಣವಾಗಿ ದತ್ತು ಸ್ವೀಕರಿಸಿ ನೂರಾರು ಮಕ್ಕಳ ಬಾಳಿಗೆ ಜ್ಞಾನದ ದೀವಿಗೆಯನ್ನು ನೀಡಿದವರು.
ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಇನ್ನಿತರ ರಾಜ್ಯಗಳಿಗೂ ಭವಾನಿ ಫೌಂಡೇಶನ್ ಟ್ರಸ್ಟ್ ನ ಸೇವಾ ಮನೋಭಾವ ಹಬ್ಬಿರುವುದು ವಿಶೇಷತೆಯಾಗಿದೆ. ರಕ್ತದಾನ ಶಿಬಿರ, ವೈದ್ಯಕೀಯ ಶಿಬಿರ, ಅದಿವಾಸಿ ಕಲ್ಯಾಣ ಯೋಜನೆಗಳನ್ನು ಪ್ರತೀ ವರ್ಷ ಆಯೋಜಿಸಿಕೊಂಡು ಬರುತ್ತಿದ್ದಾರೆ.
ಅವರ ಸಿದ್ದಿ ಸಾಧನೆಗಳಿಗೆ ಕಳಶವಿಟ್ಟಂತೆ ಇತ್ತೀಚೆಗೆ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗವು ಕುಸುಮೋದರ ಎಂಬ ಗೌರವ ಗ್ರಂಥವನ್ನು ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಪ್ರಕಟಿಸಿ ಕುಸುಮೋತ್ಸವದ ಮೂಲಕ ಅದನ್ನು ಅವರಿಗೆ ಅರ್ಪಿಸಿರುವುದು ಅವರ ಸಮಾಜ ಸೇವೆಗಳಿಗೆ ಸಂದ ಗೌರವವಾಗಿದೆ. ಹೊಗಳಿಕೆಯನ್ನು ಎಂದೂ ಬಯಸದೇ ಸಾಮಾನ್ಯರಲ್ಲಿ ಸಾಮಾನ್ಯರಾಗಿ, ನಿಸ್ವಾರ್ಥತೆಯಿಂದ ಸಮಾಜ ಸೇವೆಯ ತುಡಿತದೊಂದಿಗೆ, ಸಹೃದಯತೆಯ ಖನಿಯಾಗಿ, ಬಡವರ ಬಂಧುವಾಗಿ ಕಂಗೊಳಿಸುತ್ತಿರುವ ಕುಸುಮೋದರ ಶೆಟ್ಟಿಯವರ ವ್ಯಕ್ತಿತ್ವ ಮಾದರಿಯಾಗಿದೆ. ಯಕ್ಷಧ್ರುವ ದಶಮಾನೋತ್ಸವ ಸಮಿತಿಯ ಅಧ್ಯಕ್ಷರು ಬರೋಡ ಶಶಿಧರ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿದ ಕುಸುಮೋದರ ಶೆಟ್ಟಿಯವರು ಫೌಂಡೇಶನ್ ಗೆ ತನ್ನ ದೇಣಿಗೆಯನ್ನು ಒಂದು ಕೋಟಿ ರೂಪಾಯಿಗೆ ಹೆಚ್ಚಿಸಿದರು.