ಅಮೃತಸರ: ಎಪ್ರಿಲ್ 23 ರಿಂದ ಪಾಕಿಸ್ತಾನ ರೇಂಜರ್ಸ್ ವಶದಲ್ಲಿದ್ದ ಬಿಎಸ್‌ಎಫ್ ಕಾನ್‌ಸ್ಟೆಬಲ್ ಪೂರ್ಣಮ್ ಕುಮಾರ್ ಶಾ ಅವರನ್ನು ಬುಧವಾರ ಬೆಳಗ್ಗೆ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಅಮೃತಸರದ ಅಟ್ಟಾರಿಯಲ್ಲಿರುವ ಜಂಟಿ ಚೆಕ್‌ಪೋಸ್ಟ್‌ನಲ್ಲಿ ಬೆಳಗ್ಗೆ 10:30 ರ ಸುಮಾರಿಗೆ ಹಸ್ತಾಂತರ ನಡೆದಿದ್ದು ಸ್ಥಾಪಿತ ಶಿಷ್ಟಾಚಾರಗಳನ್ನು ಅನುಸರಿಸಿ ಶಾಂತಿಯುತವಾಗಿ ಹಸ್ತಾಂತರ ನಡೆಸಲಾಯಿತು ಎಂದು ಬಿಎಸ್‌ಎಫ್ ಹೇಳಿಕೆಯಲ್ಲಿ ತಿಳಿಸಿದೆ. ಶಾ ಅವರನ್ನು ಪ್ರಸ್ತುತ ಭದ್ರತಾ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಪಂಜಾಬ್‌ನ ಫಿರೋಜ್‌ಪುರ ಬಳಿಯ ಅಂತಾರಾಷ್ಟ್ರೀಯ ಗಡಿಯನ್ನು ಆಕಸ್ಮಿಕವಾಗಿ ದಾಟಿದ ನಂತರ 182 ನೇ ಬೆಟಾಲಿಯನ್‌ನ ಬಿಎಸ್‌ಎಫ್ ಯೋಧ ಶಾ ಅವರನ್ನು ಪಾಕಿಸ್ತಾನ ರೇಂಜರ್‌ಗಳು ಬಂಧಿಸಿದ್ದರು. ಗಡಿ ಬೇಲಿಯ ಬಳಿ ಸಮವಸ್ತ್ರದಲ್ಲಿ, ತನ್ನ ಸರ್ವಿಸ್ ರೈಫಲ್‌ನೊಂದಿಗೆ ಕರ್ತವ್ಯದಲ್ಲಿದ್ದ ಶಾ, ವಿಶ್ರಾಂತಿ ಪಡೆಯಲು ನೆರಳಿನ ಪ್ರದೇಶದ ಕಡೆಗೆ ತೆರಳಿದ ವೇಳೆ ಆಕಸ್ಮಿಕವಾಗಿ ಗಡಿ ದಾಟಿದ್ದರು ಎಂದು ವರದಿಯಾಗಿದೆ.
ಪಶ್ಚಿಮ ಬಂಗಾಳ ಮೂಲದ ಯೋಧನ ಬಿಡುಗಡೆಗೆ ಭಾರತದ ಸೇನೆ ಮತ್ತು ಅಧಿಕಾರಿಗಳು ಪಾಕಿಸ್ತಾನದ ಮೇಲೆ ಉದ್ವಿಗ್ನ ಸ್ಥಿತಿಯ ನಡುವೆಯೂ ತೀವ್ರ ಒತ್ತಡ ಹೇರಿದ್ದರು. ಯೋಧ ಶಾ ಕುಟುಂಬ ಸದಸ್ಯರೂ ಸರಕಾರದ ಬಳಿ ಬಿಡುಗಡೆ ಮಾಡಿಸಿ ಕರೆತರುವಂತೆ ಮನವಿ ಮಾಡಿದ್ದರು.