ಮನೆಯಲ್ಲೇ ಪ್ರತಿನಿತ್ಯ ಉಪಯೋಗಿಸುವ ವಸ್ತು ಬಳಸಿಕೊಂಡು ಸ್ಪೆಷಲ್ ಬೆಳ್ಳುಳ್ಳಿ-ಚಿಕನ್ ರೈಸ್ ಮಾಡಬಹುದು, ಇದು ನಮ್ಮ ಮಧ್ಯಾಹ್ನದ ಊಟದ ಸವಿಯನ್ನು ಹೆಚ್ಚಿಸುವುದರಲ್ಲಿ ಅನುಮಾನವೇ ಇಲ್ಲ. ನಿಮ್ಮ ಮನೆಯ ಫ್ರಿಜ್ಜಿನಲ್ಲಿ ಕೊಂಚ ಕೋಳಿ ಇದೆಯೇ ? ಹಾಗಾದರೆ ಇಂದೇ ತಯಾರಿಸಿ ರುಚಿ-ರುಚಿಯಾದ ಬೆಳ್ಳುಳ್ಳಿ-ಚಿಕನ್ ರೈಸ್. ಇದನ್ನು ತಯಾರಿಸುವ ವಿಧಾನ ನೋಡೋಣ…..
ಬೇಕಾಗುವ ಸಾಮಾಗ್ರಿ: 1. ಈರುಳ್ಳಿ – ¼ ಕಪ್ (ಚಿಕ್ಕದಾಗಿ ಹೆಚ್ಚಿದ್ದು) 2. ದೊಣ್ಣೆ ಮೆಣಸು-ಕೆಂಪು ಬಣ್ಣದ್ದು – ½ ಕಪ್ (ಚಿಕ್ಕದಾಗಿ ಹೆಚ್ಚಿದ್ದು) 3. ಬೆಳ್ಳುಳ್ಳಿ – 4 ಎಸಳು (ಜಜ್ಜಿದ್ದು) 4. ಅಕ್ಕಿ – ½ ಕೆ.ಜಿ (ಬೇಯಿಸದೇ ಇದ್ದದ್ದು) (ಬಾಸ್ಮತಿ ಅಕ್ಕಿ) ) 5. ಅಡುಗೆ ಎಣ್ಣೆ – 2 ದೊಡ್ಡಚಮಚ 6. ಲಿಂಬೆ ರಸ – ¼ ಕಪ್ 7. ಕೋಳಿಯ ಮಾಂಸ – ½ ಕೆ.ಜಿ (ಬೇಯಿಸದೇ ಇದ್ದದ್ದು)(ಮೂಳೆರಹಿತವಾಗಿಸಿ, ಚಿಕ್ಕ ಚಿಕ್ಕದಾಗಿ ಕತ್ತರಿಸಿದ್ದು) 8. ಹಸಿಶುಂಠಿ – 2 ದೊಡ್ಡಚಮಚ (ಚಿಕ್ಕದಾಗಿ ಹೆಚ್ಚಿದ್ದು) 9. ಸೋಯಾ ಸಾಸ್ – 2 ದೊಡ್ಡಚಮಚ 10. ಜೇನು – 1 ದೊಡ್ಡಚಮಚ 11. ಕೋಳಿಮಾಂಸದ ಸೂಪ್ – ½ ಕಪ್ 12. ತಾಜಾ ಪಾರ್ಸ್ಲೆ ಎಲೆಗಳು – 1 ದೊಡ್ಡಚಮಚ (ಚಿಕ್ಕದಾಗಿ ಹೆಚ್ಚಿದ್ದು) 13. ಉಪ್ಪು, ರುಚಿಗನುಸಾರ . ಇಷ್ಟು ಸಾಮಾಗ್ರಿಗಳಿದ್ದರೆ ಬೆಳ್ಳುಳ್ಳಿ-ಚಿಕನ್ ರೈಸ್ ರೆಸಿಪಿ ರೆಡಿ.
ತಯಾರಿಸುವ ವಿಧಾನ:ಒಂದು ದೊಡ್ಡ ಪಾತ್ರೆಯಲ್ಲಿ ಕೋಳಿಮಾಂಸ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಎಣ್ಣೆ, ಉಪ್ಪು ಮತ್ತು ಲಿಂಬೆರಸ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಸುಮಾರು ಅರ್ಧದಿಂದ ಒಂದು ಗಂಟೆ ಕಾಲ ಹಾಗೇ ಬಿಡಿ. ಒಂದು ದಪ್ಪತಳದ ಕುಕ್ಕರ್‌ನಲ್ಲಿ ಅಕ್ಕಿಯನ್ನು ಹಾಕಿ ಕೊಂಚ ನೀರಿನೊಡನೆ ಸುಮಾರು ಅರ್ಧದಷ್ಟು ಬೇಯಿಸಿ. ಬಳಿಕ ಇದಕ್ಕೆ ನೆನೆಸಿಟ್ಟ ಕೋಳಿಯ ತುಂಡುಗಳನ್ನು ಹಾಕಿ ಮಿಶ್ರಣ ಮಾಡಿ. ಈಗ ದೊಣ್ಣೆಮೆಣಸು, ಸೋಯಾ ಸಾಸ್ ಹಾಕಿ ಮಿಶ್ರಣ ಮಾಡಿ. ಬಳಿಕ ಕೋಳಿಮಾಂಸದ ಸೂಪ್ ಹಾಕಿ ಚಿಕ್ಕ ಉರಿಯಲ್ಲಿ ಮುಚ್ಚಳ ಮುಚ್ಚಿ (ಸೀಟಿ ಹಾಕಬಾರದು) ಸುಮಾರು ಐದರಿಂದ ಎಂಟು ನಿಮಿಷಗಳ ಕಾಲ ಅಥವಾ ಕೋಳಿಮಾಂಸ ಬೇಯುವವರೆಗೆ ಬೇಯಿಸಿ. ಬಳಿಕ ಅಕ್ಕಿ ಪೂರ್ಣವಾಗಿ ಬೆಂದಿದೆಯೇ ಎಂದು ನೋಡಿ. ಬೆಂದಿದೆ ಎಂದು ಖಾತ್ರಿಪಡಿಸಿಕೊಂಡ ಬಳಿಕ ಜೇನು, ಪಾರ್ಸ್ಲೆ ಎಲೆಗಳನ್ನು ಹಾಕಿ ಮಿಶ್ರಣ ಮಾಡಿ. ಬಿಸಿಬಿಸಿ ಇರುವಂತೆಯೇ ಮನೆಬಡಿಸಿ.