ಪಾಕಿಸ್ತಾನದ ಮೂರು ಫೈಟರ್‌ ಜೆಟ್‌ಗಳನ್ನು ಹೊಡೆದುರುಳಿಸಿದ ಭಾರತ, ಫತ್ತಾಹ್-ಐ ಕ್ಷಿಪಣಿ ಉಡೀಸ್

ನವದೆಹಲಿ: ಮೇ 9 ಮತ್ತು 10 ರ ಮಧ್ಯರಾತ್ರಿ ಶ್ರೀನಗರದ ಮೇಲೆ ವಾಯುದಾಳಿ ನಡೆದಿದ್ದು, ಭಾರತ ಪಾಕಿಸ್ತಾನದ ಮೂರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ. ಆಕಾಶ್ ವಾಯು ರಕ್ಷಣಾ ವ್ಯವಸ್ಥೆಯನ್ನು ಬಳಸಿಕೊಂಡು ಶ್ರೀನಗರದ ಹೊರವಲಯದಲ್ಲಿ ಜೆಟ್‌ಗಳನ್ನು ಹೊಡೆದುರುಳಿಸಲಾಗಿದ್ದು, ಪೈಲಟ್‌ಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಅಲ್ಲದೆ ಫತಾಹ್ -1 ಕ್ಷಿಪಣಿಗಳನ್ನು ಉಡೀಸ್‌ ಮಾಡಲಾಗಿದೆ.

ಎರಡು ಪರಮಾಣು ರಾಷ್ಟ್ರಗಳ ನಡುವಿನ ಉದ್ವಿಗ್ನತೆಯ ಹೆಚ್ಚುತ್ತಿರುವ ಬೆನ್ನಲ್ಲೇ ಪಾಕಿಸ್ತಾನವು ಜಮ್ಮು, ಶ್ರೀನಗರ, ಅಮೃತಸರ, ಪಠಾಣ್‌ಕೋಟ್, ಉಧಂಪುರ, ನವದೆಹಲಿ, ಜಲಂಧರ್ ಮತ್ತು ಸಿರ್ಸಾ ಸೇರಿದಂತೆ ಹಲವಾರು ಭಾರತೀಯ ನಗರಗಳನ್ನು ಗುರಿಯಾಗಿಸಿಕೊಂಡು ತನ್ನ ಅಲ್ಪ-ಶ್ರೇಣಿಯ ಫತಾಹ್ -1 ಕ್ಷಿಪಣಿಗಳನ್ನು ಉಡಾಯಿಸಿತ್ತು. ಆದರೆ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ಕ್ಷಿಪಣಿಗಳನ್ನು ಯಶಸ್ವಿಯಾಗಿ ಉಡಾಯಿಸುವ ಮೂಲಕ ಮರ್ಮಾಘಾತ ನೀಡಿದೆ.

“ನಮ್ಮ ಪಶ್ಚಿಮ ಗಡಿಗಳಲ್ಲಿ ಪಾಕಿಸ್ತಾನದ ಡ್ರೋನ್ ದಾಳಿ ಮತ್ತು ಇತರ ಯುದ್ಧಸಾಮಗ್ರಿಗಳನ್ನು ಬಳಸಿ ದಾಳಿ ಮುಂದುವರೆಸಿದೆ. ಅಂತಹ ಒಂದು ಘಟನೆಯಲ್ಲಿ, ಇಂದು ಬೆಳಿಗ್ಗೆ ಸುಮಾರು 5 ಗಂಟೆಗೆ, ಅಮೃತಸರದ ಖಾಸಾ ಕ್ಯಾಂಟ್ ಮೇಲೆ ಪಾಕಿಸ್ತಾನದ ಶಸ್ತ್ರಸಜ್ಜಿತ ಡ್ರೋನ್‌ಗಳು ಕಂಡುಬಂದವು. ನಮ್ಮ ವಾಯು ರಕ್ಷಣಾ ಘಟಕಗಳು ಶತ್ರು ಡ್ರೋನ್‌ಗಳನ್ನು ತಕ್ಷಣವೇ ನಾಶಪಡಿಸಿದವು. ಭಾರತದ ಸಾರ್ವಭೌಮತ್ವವನ್ನು ಉಲ್ಲಂಘಿಸುವ ಮತ್ತು ನಾಗರಿಕರನ್ನು ಅಪಾಯಕ್ಕೆ ಸಿಲುಕಿಸುವ ಪಾಕಿಸ್ತಾನದ ದುಷ್ಟ ಸ್ವೀಕಾರಾರ್ಹವಲ್ಲ. ಆದರೆ ಭಾರತೀಯ ಸೇನೆಯು ಶತ್ರುಗಳ ಉದ್ದೇಶಗಳನ್ನು ವಿಫಲಗೊಳಿಸುತ್ತದೆ” ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

ಫತ್ತಾಹ್-ಐ ಕ್ಷಿಪಣಿ ಸಾಮರ್ಥ್ಯವೇನು?
ಫತ್ತಾಹ್-ಐ ಕ್ಷಿಪಣಿ ಇರಾನ್‌ನ ಮೊದಲ ಹೈಪರ್‌ಸಾನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಹೈಪರ್‌ಸಾನಿಕ್ ಮಧ್ಯಮ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಅಭಿವೃದ್ಧಿಪಡಿಸಿದೆ. ಇದರ ಹೆಚ್ಚಿನ ನಿಖರತೆ ಮತ್ತು ವೇಗದಿಂದಾಗಿ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳಿಂದ ತಪ್ಪಿಸಿ ತನ್ನ ಗುರಿಯನ್ನು ತಲುಪುತ್ತದೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಇರಾನ್ ಪ್ರಕಾರ, ಫತ್ತಾಹ್-ಐ ಕ್ಷಿಪಣಿ ವಾತಾವರಣದ ಒಳಗೆ ಮತ್ತು ಹೊರಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸಬಲ್ಲುದು ಎಂದು ಹೇಳಿಕೊಂಡಿತ್ತು. ಆದರೆ ಅದನ್ನು ಭಾರತ ಹೊಡೆದುರುಳಿಸುವ ಮೂಲಕ ಭಾರತದ ರಕ್ಷಣಾ ವ್ಯವಸ್ಥೆ ಅದೆಷ್ಟು ಪರಿಣಾಮಕಾರಿಯಾಗಿದೆ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.

error: Content is protected !!