ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ: ಸ್ಪೀಕರ್‌ ಖಾದರ್‌ ಹೇಳಿದ್ದೇನು?

ಮಂಗಳೂರು : ಇತ್ತೀಚೆಗೆ ಬಜ್ಪೆ ಕಿನ್ನಿಪದವಿನಲ್ಲಿ ಹತ್ಯೆಗೀಡಾದ ಸುಹಾಸ್‌ ಶೆಟ್ಟಿ ಪ್ರಕರಣವನ್ನು ಎನ್‌ಐಎಗೆ ವಹಿಸುವಂತೆ ವಿಪಕ್ಷಗಳು ಸರ್ಕಾರದ ಮುಂದೆ ಬೇಡಿಕೆ ಇಟ್ಟಿರುವ ಕುರಿತಂತೆ ಪ್ರತಿಕ್ರಿಯಿಸಿದ ವಿಧಾನ ಸಭಾ ಸ್ಪೀಕರ್‌ ಯು.ಟಿ. ಖಾದರ್‌, ಯಾವುದೇ ರೀತಿಯ ತನಿಖೆಯ ಬೇಡಿಕೆಗೂ ನನ್ನ ಅಭ್ಯಂತರ, ಆಕ್ಷೇಪ ಇಲ್ಲ. ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುವುದು ಹೊರ ಬರಬೇಕು ಎನ್ನುವುದು ನನ್ನ ಉದ್ದೇಶ. ಯಾರೇ ಈ ಕೊಲೆ ಮಾಡಿದ್ದರೂ ಅವರಿಗೆ ಕಠಿಣ ಶಿಕ್ಷೆ ಆಗಬೇಕು, ಹಾಗೂ ಮುಂದೆ ಇಂತಹಾ ಘಟನೆಗಳು ನಡೆಯಬಾರದು. ಯಾಕೆಂದರೆ ನನಗೆ ರಾಜಕೀಯ ಮುಖ್ಯ ಅಲ್ಲ. ದ.ಕ. ಜಿಲ್ಲೆಯ ಶಾಂತಿ ಸೌಹಾರ್ದತೆ ಹಾಳಾಗಬಾರದು, ಜಿಲ್ಲೆ ಸಮಗ್ರ ಅಭಿವೃದ್ಧಿಯಾಗಬೇಕೆನ್ನುವುದೇ ನನ್ನ ಮುಖ್ಯ ಉದ್ದೇಶ ಎಂದರು.

ಸೆ.8ರಿಂದ 10ರವರೆಗೆ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಶನ್‌ನ ಅಖಿಲ ಭಾರತ ಸ್ಪೀಕರ್‌ಗಳ ಸಮ್ಮೇಳನದ ಕುರಿತು ಮಾಹಿತಿ ನೀಡಲು ಯು.ಟಿ ಖಾದರ್‌ ಮಂಗಳೂರಿನ ಸರ್ಕ್ಯೂಟ್‌ ಹೌಸ್‌ನಲ್ಲಿ ಮಾಧ್ಯಮಗೋಷ್ಠಿಯನ್ನು ಆಯೋಜಿಸಿದ್ದರು. ಆರಂಭದಲ್ಲಿ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಅವರು, ಅಂತಿಮವಾಗಿ ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿಪಕ್ಷಗಳ ಶಾಸಕರ ಆರೋಪವನ್ನು ಪತ್ರಕರ್ತರು ಗಮನಕ್ಕೆ ತಂದರು.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ತೃಪ್ತಿಕರವಾಗಿಲ್ಲ. ಕೃತ್ಯಕ್ಕೆ ಅಂತರರಾಷ್ಟ್ರೀಯವಾಗಿ ಸಾಕಷ್ಟು ಹಣ ಹರಿದು ಬಂದಿರುವ ಬಗ್ಗೆ ಬಿಜೆಪಿ ಶಾಸಕರು ಆರೋಪಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಖಾದರ್‌, ಈ ಬಗ್ಗೆ ತನಿಖೆಯಾಗಲಿ, ತನಿಖೆಯ ಬಳಿಕ ಸತ್ಯ ಹೊರಬರುತ್ತದೆ ಎಂದರು.


ತಪ್ಪು ಮಾಡಿದವರನ್ನು ಬೆಂಬಲಿಸುವ ವ್ಯಕ್ತಿ ನಾನಲ್ಲ, ಅದರ ಬಗ್ಗೆ ನನ್ನ ಜಿಲ್ಲೆಯ ಕ್ಷೇತ್ರದ ಜನರಿಗೆ ಅರಿವಿದ್ದು, ಅವರು ನನ್ನನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದಾರೆ. ಅಂದಿನ ಉದ್ವೇಗದ ವಾತಾವರಣದಲ್ಲಿ ಉದ್ವಿಗ್ನತೆ ಕಡಿಮೆಯಾಗಬೇಕು, ಸೌಹಾರ್ದತೆಗೆ ಧಕ್ಕೆ ಆಗಬಾರದು ಎಂಬ ಉದ್ದೇಶದಿಂದ ನನಗೆ ಸಿಕ್ಕ ಮಾಹಿತಿಯನ್ನು ಕ್ಷೇತ್ರದ ಜನರಿಗೆ ತಿಳಿಸಿದ್ದೇನೆ ಅಷ್ಟೆ. ಪೊಲೀಸರು ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ವಹಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ವಿಷಯದಲ್ಲಿ ಟೀಕೆ ಮಾಡುವವರು, ರಾಜಕೀಯ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇಂತಹ ಆರೋಪ, ಟೀಕೆಗಳು ನನಗೆ ಹೊಸತೇನು ಅಲ್ಲ. ಶಾಸಕನಾಗುವ ಮುಂಚಿನಿಂದಲೇ ಈ ಆರೋಪಗಳು ಕೇಳಿ ಬರುತ್ತಿವೆ. ಪ್ರಜಾಪ್ರಭುತ್ವದಲ್ಲಿ ಮಾತನಾಡಲು ಅವರಿಗೆ ಅವಕಾಶ ಇದೆ. ಟೀಕೆಗಳಿಗೆ ನಾನೆಂದಿಗೂ ತಲೆಕೆಡಿಸಿಕೊಂಡವನಲ್ಲ. ಜಿಲ್ಲೆ ಅಭಿವೃದ್ಧಿಯಾಗಬೇಕು, ಉದ್ಯಮಿಗಳು ಇಲ್ಲಿ ಬಂಡವಾಳ ಹೂಡುವಂತಾಗಬೇಕು. ಅಂತಹ ವಾತಾರಣ ನಮ್ಮಲ್ಲಿ ಸೃಷ್ಟಿಯಾಗಬೇಕು ಎಂದರು.
ಮುಸ್ತಫಾ ಎನ್ನುವವರ ಕ್ರಿಕೆಟ್‌ ಟೂರ್ನಮೆಂಟ್‌ಗೆ ಹೋಗಿದ್ದರೆಂಬ ಪ್ರತಿಪಕ್ಷಗಳ ಆರೋಪಕ್ಕೆ ಉತ್ತರಿಸಿದ ಅವರು, ನನನ್ನು ಕ್ಷೇತ್ರ ಹಾಗೂ ಜಿಲ್ಲೆ, ರಾಜ್ಯದ ಜನರು ಕ್ರಿಕೆಟ್, ಮದುವೆ, ಊರಿನ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಾರೆ. ನಾನು ಭಾಗವಹಿಸುತ್ತೇನೆ. ಇದೀಗ ಬಿಜೆಪಿಯವರು ಆರೋಪಿಸುತ್ತಿರುವ ಕ್ರಿಕೆಟ್‌ಗೆ ನಾನು ಹೋಗಿಲ್ಲ ಎನ್ನುವುದು ಅವರ ನೆನಪಿಗೆ ತರಲು ಬಯಸುತ್ತೇನೆ. ಪೋಸ್ಟರ್ ಹಾಕಿದರೆ ನನಗೆ ಸಂಬಂಧ ಇದೆಯೆಂದು ಅರ್ಥ ಆಗುತ್ತಾ? ಎಂದು ಪ್ರಶ್ನಿಸಿದರು. ವಿಪಕ್ಷಗಳ ಶಾಸಕರು ಮಾಡಿರುವ ಇನ್ನಷ್ಟು ಆರೋಪಗಳ ಬಗ್ಗೆ ಪತ್ರಕರ್ತರು ಖಾದರ್‌ ಗಮನ ಸೆಳೆದಾಗ, ನಾನು ಇಂದು ಬಂದಿರುವುದು ಆ ವಿಚಾರ ಮಾತಾಡಲು ಅಲ್ಲ ಪ್ರತಿಕ್ರಿಯಿಸಲು ನಿರಾಕರಿಸಿದರು.

ಸೆ.8ರಿಂದ 10ರವರೆಗೆ ಕಾಮನ್‌ವೆಲ್ತ್ ಪಾರ್ಲಿಮೆಂಟರಿ
ಅಸೋಸಿಯೇಶನ್‌ನ ಅಖಿಲ ಭಾರತ ಸ್ಪೀಕರ್‌ಗಳ ಸಮ್ಮೇಳನ
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸೆ.8ರಿಂದ 10ರವರೆಗೆ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಶನ್‌ನ ಅಖಿಲ ಭಾರತ ಸ್ಪೀಕರ್‌ಗಳ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಯು.ಟಿ.ಖಾದರ್ ಆರಂಭದಲ್ಲಿ ಮಾಹಿತಿ ನೀಡಿದ್ದಾರೆ.
ಸಮ್ಮೇಳನವನ್ನು ಕರ್ನಾಟದಲ್ಲಿ ನಡೆಸಲು ಮೊದಲ ಬಾರಿ ಅವಕಾಶ ನೀಡಿದ್ದು, ಬೆಂಗಳೂರಿನಲ್ಲಿ ಈ ಸಮಾವೇಶ ಸಂಘಟಿಸಲು ತೀರ್ಮಾನಿಸಲಾಗಿದೆ. ಇದರಿಂದ ರಾಜ್ಯದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ದೇಶದ ಎಲ್ಲಾ ರಾಜ್ಯಗಳ ವಿಧಾನಸಭೆ ಮತ್ತು ವಿಧಾನ ಪರಿಷತ್ತುಗಳ ಸ್ಪೀಕರ್, ಡೆಪ್ಯುಟಿ ಸ್ಪೀಕರ್‌ಗಳು, ಕಾರ್ಯದರ್ಶಿಗಳು ಸೇರಿದಂತೆ 300ರಷ್ಟು ಮಂದಿ ಭಾಗವಹಿಸಲಿದ್ದಾರೆ. ಸೆ.8ರಂದು ಸಂಜೆ 6 ಗಂಟೆಗೆ ವಿಧಾನ ಸೌಧದ ಗ್ರೌಂಡ್ ಸ್ಟೆಪ್‌ನಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಈ ಸಮ್ಮೇಳನಕ್ಕೆ ಚಾಲನೆ ದೊರಯಲಿದೆ. ಲೋಕಸಭೆ ಸ್ಪೀಕರ್, ರಾಷ್ಟ್ರಪತಿ, ಉಪ ರಾಷ್ಟ್ರಪತಿ ಸೇರಿದಂತೆ ಇತರ ಹಲವು ಗಣ್ಯರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕಳೆದ ವರ್ಷ ನವದೆಹಲಿಯಲ್ಲಿ ಈ ಸಮಾವೇಶ ನಡೆದಿದ್ದರೆ, ಅದಕ್ಕಿಂತ ಹಿಂದಿನ ವರ್ಷ ರಾಜಸ್ತಾನದಲ್ಲಿ ನಡೆದಿತ್ತು. ಇದೀಗ ಮೊದಲ ಬಾರಿಗೆ ಕರ್ನಾಟಕದಲ್ಲಿ ನನ್ನ ಮತ್ತು ವಿಧಾನ ಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ ಅವರ ಅವಧಿಯಲ್ಲಿ ಈ ಅವಕಾಶ ದೊರಕಿದೆ. ಈ ಸಮ್ಮೇಳನವನ್ನು ಮಾದರಿಯಾಗಿ ನಡೆಸಲಾಗುವುದು ಎಂದು ಸ್ಪೀಕರ್‌ ಖಾದರ್‌ ವಿವರಿಸಿದ್ದಾರೆ.

error: Content is protected !!