ಮಂಗಳೂರು: ಅಪಘಾತ ನಡೆಸಿ ಐರಿನ್ ಡಿ’ಸೋಜ (72) ಎಂಬ ವೃದ್ಧೆಯ ಸಾವಿಗೆ ಕಾರಣನಾದ ಖಾಸಗಿ ಬಸ್ ಚಾಲಕ ಕುಡುಪು ಮಂಗಳನಗರ ತಿರುವೈಲ್ ವಾಮಂಜೂರು ನಿವಾಸಿ ಎಚ್. ಭಾಸ್ಕರ್‌ಗೆ ಮಂಗಳೂರಿನ ಮಾನ್ಯ JMFC 3ನೇ ನ್ಯಾಯಾಲಯ 9 ತಿಂಗಳು ಜೈಲು ವಾಸ ಹಾಗೂ ರೂಪಾಯಿ 27,000- ದಂಡ ವಿಧಿಸಿ ತೀರ್ಪು ನೀಡಿದೆ.

ಪ್ರಕರಣ ವಿವರ: ಆರೋಪಿ ಚಾಲಕ ಎಚ್ ಭಾಸ್ಕರ್ 30-03-2023 ರಂದು ಮಧ್ಯಾಹ್ನ ಸುಮಾರು 12:00 ಗಂಟೆಗೆ ತಾನು ಚಲಾಯಿಸಿತ್ತಿದ್ದ KA-19-AA-2282 ನಂಬ್ರದ ಖಾಸಗಿ ಸಿಟಿ ಬಸ್ ಚಲಾಯಿಸುತ್ತಿದ್ದ. ಬಸ್ಸನ್ನು ಕೊಲಾಸೋ ಆಸ್ಪತ್ರೆ ಕಡೆಯಿಂದ ಬೆಂದೂರ್ ವೆಲ್ ಜಂಕ್ಷನ್ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಕಾಂಕ್ರೆಟ್ ರಸ್ತೆಯಲ್ಲಿ ಚಲಾಯಿಸಿಕೊಂಡು ಬಂದು ಬೆಂದೂರುವೆಲ್ ಜಂಕ್ಷನಿನಲ್ಲಿ ಹೊಟೇಲ್ ಎದುರುಗಡೆ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿದ್ದನು. ಈ ಪೈಕಿ ಐರಿನ್ ಡಿ’ಸೋಜ ಎಂಬವರು ಇದೇ ಬಸ್ಸಿನಿಂದ ಕೆಳಗಿಳಿದು ಬಸ್ಸಿನ ಮುಂಭಾಗದಿಂದಲೇ ಕೊಲಾಸೋ ಕಡೆಯಿಂದ ಬೆಂದೂರುವೆಲ್ ಜಂಕ್ಷನ್ ಕಡೆಗೆ ಹಾದುಹೋಗಿರುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯನ್ನು ದಾಟುತ್ತಿದ್ದರು. ಆಗ ಚಾಲಕ ಎಸ್. ಭಾಸ್ಕರ್ ಐರಿನ್ ಡಿ’ಸೋಜ ರವರನ್ನು ಗಮನಿಸದೇ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ನಿರ್ಲಕ್ಷ್ಯತನದಿಂದ ಒಮ್ಮೆಲೇ ಬಸ್ಸನ್ನು ಮುಂದಕ್ಕೆ ಚಲಾಯಿಸಿ ಐರಿನ್ ಡಿ’ಸೋಜರವರಿಗೆ ಢಿಕ್ಕಿ ಹೊಡೆದಿದ್ದ. ವೃದ್ಧೆ ಕಾಂಕ್ರೀಟ್ ರಸ್ತೆಗೆ ಬಿದ್ದಿದ್ದು, ಬಸ್ಸಿನ ಬಲಬದಿಯ ಮುಂದಿನ ಚಕ್ರವು ಆಕೆಯ ತಲೆ ಮೇಲೆ ಹರಿದು ಹೋಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಬಸ್ಸಿನ ಚಾಲಕನು ತನ್ನ ಬಸ್ಸನ್ನು ಅಪಘಾತ ಸ್ಥಳದಲ್ಲಿ ನಿಲ್ಲಿಸದೇ ಬಸ್ಸಿನೊಂದಿಗೆ ಪರಾರಿಯಾಗಿದ್ದು, ಈ ಅಪಘಾತದ ಬಗ್ಗೆ ಸಂಚಾರ ಪೂರ್ವ ಠಾಣೆಯಲ್ಲಿ ಸಂಚಾರ ಪೂರ್ವ ಪೊಲೀಸ್ ಠಾಣೆ ಅ.ಕ್ರ. 44/2023 ಕಲಂ:279(304) IPC & 184 MV Act ಪ್ರಕಾರ ಪ್ರಕರಣದ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ವಿಚಾರಣೆ ನಡೆಸಿದ ಮಂಗಳೂರಿನ ಮಾನ್ಯ JMFC 3ನೇ ನ್ಯಾಯಾಲಯದ ನ್ಯಾಯಾಧೀಶರಾದ ಸುರೇಶ್ E.S ರವರು ದಿನಾಂಕ: 05-05-2025 ರಂದು ಆರೋಪಿಗೆ 9 ತಿಂಗಳು ಜೈಲು ವಾಸ ಹಾಗೂ ರೂಪಾಯಿ 27,000/- ದಂಡ ವಿಧಿಸಿ ಆದೇಶಿಸಿರುತ್ತಾರೆ.
ಸಂಚಾರ ಪೂರ್ವ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ನಾಗರಾಜ್ ಪ್ರಕರಣದ ತನಿಖೆ ನಡೆಸಿದ್ದು ಪೊಲೀಸ್ ನಿರೀಕ್ಷಕರಾದ ಗೋಪಾಲಕೃಷ್ಣ ಭಟ್ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರಾದ ಗೀತಾ ರೈ ಸಾಕ್ಷೀಧಾರರ ಸಾಕ್ಷಿ ವಿಚಾರಣೆ ಮಾಡಿ ವಾದ ಮಂಡಿಸಿರುತ್ತಾರೆ. ಸದರಿ ಪ್ರಕರಣದಲ್ಲಿ CCTV ದೃಶ್ಯಗಳನ್ನು ಮಾನ್ಯ ನ್ಯಾಯಾಲಯವು ಪ್ರಮುಖ ಸಾಕ್ಷೀಯಾಗಿ ಪರಿಗಣಿಸಿ ಅಂತಿಮ ತೀರ್ಪು ನೀಡಿದೆ.