ನವದೆಹಲಿ: ಗಡಿಯಾಚೆಗಿನ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ, 2025 ರ ಇಂಡಿಯನ್ ಪ್ರೀಮಿಯರ್ ಲೀಗ್(IPL) ಆವೃತ್ತಿಯ ಇಂದಿನ ಮ್ಯಾಚ್ ಅನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪರ್ಯಾಯ ಆಯ್ಕೆಗಳತ್ತ ಚಿಂತನೆ ನಡೆಸಿದೆ.
ಭಾರತ-ಪಾಕಿಸ್ತಾನ ನಡುವೆ ಯುದ್ಧ ನಡೆಯುತ್ತಿರುವುದರಿಂದ ದೇಶವಾಸಿಗಳ ಭಾವನೆಯನ್ನು ಗೌರವಿಸಿ ಲೀಗ್ ಮುಂದುವರಿಸುವುದನ್ನು ಭಾರತೀಯ ಕ್ರಿಕೆಟ್ ಮಂಡಳಿ ಬಯಸುವುದಿಲ್ಲ ಎಂದು ತಿಳಿದುಬಂದಿದೆ. ಪ್ರಸ್ತುತ ವಿದ್ಯಾಮಾನಗಳಿಂದ ವಿವಿಧ ಫ್ರಾಂಚೈಸಿಗಳ ಅನೇಕ ವಿದೇಶಿ ಆಟಗಾರರು ಭಯಭೀತರಾಗಿದ್ದಾರೆ. ಇಂದು ರಾತ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಲಕ್ನೋದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಲಿದ್ದವು. ಆದರೆ ಆಟಗಾರರು ಭಯಪಡುತ್ತಿದ್ದು, ಮನೆಗೆ ಹೋಗಲು ಬಯಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನ ಪಂದ್ಯವನ್ನು ರದ್ದುಗೊಳಿಸಲಾಗಿದೆ.
ಗುರುವಾರ ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಪಂಜಾಬ್-ದಿಲ್ಲಿ ನಡುವೆ ನಡೆಯುತ್ತಿದ್ದ ಐಪಿಎಲ್ ಪಂದ್ಯಾಟವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಒಂದು ವಾರ ಪಂದ್ಯಾವಳಿಯನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.
ನಿನ್ನೆ ಪಾಕಿಸ್ತಾನವು ಸತ್ವಾರಿ, ಸಾಂಬಾ, ಆರ್‌ಎಸ್ ಪುರ ಮತ್ತು ಅರ್ನಿಯಾ ಕಡೆಗೆ ಎಂಟು ಕ್ಷಿಪಣಿಗಳನ್ನು ಹಾರಿಸಿತ್ತು. ಆದರೆ ಅದನ್ನು ಭಾರತದ ವಾಯು ರಕ್ಷಣಾ ಘಟಕಗಳು ತಡೆಹಿಡಿದು ನಿರ್ಬಂಧಿಸಿದ್ದಲ್ಲದೆ ಎಲ್ಲವನ್ನೂ ಹೊಡೆದುರುಳಿಸಿತ್ತು. ಅದರ ಬೆನ್ನಲ್ಲೇ ಪಂದ್ಯವನ್ನು ನಿಲ್ಲಿಸಲಾಗಿತ್ತು.
ಇದಕ್ಕೂ ಮೊದಲು, ಧರ್ಮಶಾಲಾ ಮತ್ತು ಹತ್ತಿರದ ನಗರಗಳಲ್ಲಿ ವಾಯುಪ್ರದೇಶವನ್ನು ಮುಚ್ಚುವುದಾಗಿ ಸರ್ಕಾರ ಘೋಷಿಸಿದ್ದರಿಂದ ಪಿಬಿಕೆಎಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿತ್ತು. ಪಿಬಿಕೆಎಸ್ vs ಡಿಸಿ ಪಂದ್ಯವನ್ನು ರದ್ದುಗೊಳಿಸಿದ ನಂತರ, ಎರಡೂ ತಂಡಗಳು ತಮ್ಮ ಹೋಟೆಲ್‌ಗೆ ಮರಳಿದವು. ಅಧಿಕಾರಿಗಳು ಮತ್ತು ಪ್ರಸಾರ ಸಿಬ್ಬಂದಿಯೊಂದಿಗೆ ಇಡೀ ತಂಡವು ಇಂದು (ಮೇ 9) ವಿಶೇಷ ರೈಲಿನಲ್ಲಿ ಧರ್ಮಶಾಲಾದಿಂದ ಹೊರಟಿತು.
ಈ ಬಗ್ಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಕೂಡಾ ದೃಢಪಡಿಸಿದರು, “ರೈಲಿನ ಮೂಲಕ ಎಲ್ಲರನ್ನೂ ಸುರಕ್ಷಿತವಾಗಿ ಮರಳಿ ಕಳಿಸಲಾಗಿದೆ. ಪಂದ್ಯವನ್ನು ರದ್ದುಗೊಳಿಸಲಾಗಿದ್ದು, ಕ್ರೀಡಾಂಗಣವನ್ನು ಸ್ಥಳಾಂತರಿಸಲಾಗಿದೆ. ನಾಳೆಯ ಪರಿಸ್ಥಿತಿಯನ್ನು ಆಧರಿಸಿ ಪಂದ್ಯಾವಳಿಯ ಭವಿಷ್ಯದ ಬಗ್ಗೆ ನಾವು ನಿರ್ಧರಿಸುತ್ತೇವೆ, ಆದರೆ ನಮಗೆ ಆಟಗಾರರ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದಿದ್ದಾರೆ.
ಸದ್ಯಕ್ಕೆ ಯಾವುದೇ ಐಪಿಎಲ್ ಸ್ಥಳಗಳಿಗೆ ಬೆದರಿಕೆ ಇಲ್ಲದಿದ್ದರೂ, ಒಟ್ಟಾರೆ ಜನತೆಯ ಭಾವನೆ, ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆಗೆ ಆದ್ಯತೆ ನೀಡಲು ಪಂದ್ಯಾವಳಿಯನ್ನು ತಾತ್ಕಾಲಿಕವಾಗಿ ಪಂದ್ಯಾಟವನ್ನು ಸ್ಥಗಿತಗೊಳಿಸಲಾಗಿದೆ.