ಬೆಂಗಳೂರು: ʻಆಪರೇಷನ್ ಸಿಂಧೂರ್ʼ ಹೆಸರಿನಲ್ಲಿ ಪಹಲ್ಗಾಂ ಘೋರ ಹತ್ಯಾಕಾಂಡದ ವಿರುದ್ಧ ಪ್ರತೀಕಾರ ತೀರಿಸಿದ ಭಾರತದ ಸೇನೆಯ ಯಶಸ್ವಿ ಹಾಗೂ ಬಲವರ್ಧನೆಗಾಗಿ ರಾಜ್ಯದ ಎಲ್ಲಾ ವಕ್ಫ್ ಮಸೀದಿ ಹಾಗೂ ಇತರ ಮಸೀದಿಗಳಲ್ಲಿ ನಾಳೆ ಅಂದರೆ ಶುಕ್ರವಾರ ವಿಶೇಷ ಪ್ರಾರ್ಥನೆ ಸಲ್ಲಿಸಲು ಕರ್ನಾಟಕ ಕಾಂಗ್ರೆಸ್ ಸರ್ಕಾರ ಸೂಚನೆ ನೀಡಿದೆ.
ಪಹಲ್ಗಾಂನಲ್ಲಿ ಉಗ್ರಗಾಮಿಗಳು 26 ಮಂದಿ ಭಾರತೀಯ ಪ್ರವಾಸಿಗರನ್ನು ಹತ್ಯೆಗೈದ ಹಿನ್ನೆಲೆಯಲ್ಲಿ ಭಾರತೀಯ ಸೈನ್ಯ ʻಆಪರೇಷನ್ ಸಿಂಧೂರʼ ಹೆಸರಿನಲ್ಲಿ ನಡೆಸಿದ ದಾಳಿಯಲ್ಲಿ ಉಗ್ರರ ನೆಲೆಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಲಾಗಿದೆ.
ಭಯೋತ್ಪಾದಕರನ್ನು ದಮನ ಮಾಡಿ ದೇಶದ ಶಾಂತಿಗೆ ಮುಂದಾಗುತ್ತಿರುವ ಹೆಮ್ಮೆಯ ದೇಶದ ಸೈನಿಕರಿಗೆ ಶಕ್ತಿ ತುಂಬಲು ಅವರ ಶ್ರೇಯಸ್ಸಿಗಾಗಿ ರಾಜ್ಯದ ಎಲ್ಲಾ ವಕ್ಫ್‌ಗೆ ಸೇರಿದ ಮಸೀದಿಗಳಲ್ಲಿ ಹಾಗೂ ಇತರ ಮಸೀದಿಗಳನ್ನು ಪ್ರಾರ್ಥಿಸಲು ಸೂಚನೆ ನೀಡಲಾಗಿದೆ ಎಂದು ರಾಜ್ಯದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವರು ಹಾಗೂ ವಿಜಯನಗರದ ಜಿಲ್ಲೆಯ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಪರವಾಗಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುತ್ತೋಲೆ ಹೊರಡಿಸಿದ್ದಾರೆ.