ಮಂಗಳೂರು: ಯು.ಟಿ ಖಾದರ್ ಜಾತ್ಯತೀತ ನೆಲೆಯಲ್ಲಿ ಸಹಾಯ ಮಾಡುವಂತಹ ವ್ಯಕ್ತಿ. ಇದೀಗ ಸ್ಪೀಕರ್ ಆಗಿರುವುದರಿಂದ ಈಗ ಅವರು ತಮ್ಮ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿರಬಹುದು ಆದರೆ ನಮ್ಮ ಕ್ಷೇತ್ರದ ಶಾಸಕರು ಆಗಿದ್ದಾರೆ. ಅವರ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ (MUDA) ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲರಿಗೆ ಟಾಂಗ್ ನೀಡಿದ್ದಾರೆ.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ತನಿಖೆಗೆ ಮೊದಲೇ ಕ್ಲೀನ್ ಚಿಟ್ ಹೇಳಿಕೆ ನೀಡಿರುವ ಸ್ಪೀಕರ್ ಯು.ಟಿ. ಖಾದರ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದ ಸತೀಶ್ ಕುಂಪಲರ ಹೇಳಿಕೆಯನ್ನು ಖಂಡಿಸಿ ನಗರದ ಮಲ್ಲಿಕಟ್ಟೆ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಅವರು, ಸುಹಾಸ್ ಶೆಟ್ಟಿ ಹತ್ಯೆ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎನ್ನುವುದು ಸ್ಪೀಕರ್ ಅವರ ಧೋರಣೆಯೂ ಹೌದು. ಅವರು ಕ್ರಿಮಿನಲ್ ಕೃತ್ಯಗಳಿಗೆ ಸಹಾಯ ಮಾಡುವ ವ್ಯಕ್ತಿಯಲ್ಲ. ಹತ್ಯೆಗೀಡಾದ ಸುಹಾಸ್ ಎರಡು ಕೊಲೆ ಪ್ರಕರಣದಲ್ಲಿ ಇದ್ದವರು. ಹಾಗೆಂದು ಅವರನ್ನು ಹಾಗೆ ಮಾಡಬೇಕೆಂದು ಹೇಳುವುದಿಲ್ಲ. ಕ್ರಿಮಿನಲ್ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎನ್ನುವುದು ಖಾದರ್ ನಿಲುವು. ಬಹುಶಃ ಕೊಲೆಯಾದ ಸುಹಾಸ್ ಶೆಟ್ಟಿ ಮೇಲೆ ರೌಡಿಶೀಟರ್ ತೆರೆದವರು ಬಿಜೆಪಿಯವರೇ ಎನ್ನುವುದು ಕುಂಪಲರಿಗೆ ಗೊತ್ತಿಲ್ಲ ಕಾಣಬೇಕು ಎಂದು ಲೇವಡಿ ಮಾಡಿದರು.
ಸತೀಶ್ ಕುಂಪಲ ನಮ್ಮ ಊರವರೇ ಆಗಿದ್ದಾರೆ. ಆದರೆ ಈ ರೀತಿ ಹೇಳಿಕೆ ನೀಡುವುದು ಅವಿಗೆ ಶೋಭೆ ತರುವುದಿಲ್ಲ. ಕುಂಪಲ ಸಂತೋಷ್ ಕುಮಾರ್ ಶೆಟ್ಟಿಯವರಿಗೆ ಎಲೆಕ್ಷನ್‌ನಲ್ಲಿ ಏನು ಮಾಡಿದರು? ಎನ್ನುವುದನ್ನು ಅದನ್ನು ಓಪನ್ ಆಗಿ ಹೇಳಬೇಕಾಗಿಲ್ಲ. ಅಲ್ಲಿ ಅವರು ಸಹಕಾರಿ ಸಂಘ ಸ್ಥಾಪಿಸಿ ಏನು ಮಾಡಿದರು? ಲಕ್ಷ ಗಟ್ಟಲೆ ಲೋನ್ ತೆಗೆದುಕೊಂಡು ಅದನ್ನು ಮುಚ್ಚಿಕೊಂಡು ಅವ್ಯವಸ್ಥೆ ಮಾಡಿದರು. ಭೂ ವ್ಯವಹಾರದಲ್ಲಿ ಮಾರಾಟ ಮಾಡಲು ಯಾರಾದರೂ ಸ್ಥಳ ಕೊಟ್ಟರೆ ಅದರಲ್ಲಿ ಎಷ್ಟು ಹಗರಣಗಳಾಗಿದೆ? ಇಷ್ಟೆಲ್ಲಾ ಹಗರಣಗಳಲ್ಲಿ ಇರುವವರು ಖಾದರ್ ಬಗ್ಗೆ ಬೆರಳು ತೋರಿಸಿ ಮಾತಾಡುವ ನೈತಿಕತೆ ಇದೆಯಾ? ಖಾದರ್ ನಮ್ಮ ಕ್ಷೇತ್ರದ ಶಾಸಕನ ನೆಲೆಯಲ್ಲಿ ಹೇಳ್ತಾ ಇದ್ದೇನೆ, ಈ ಪ್ರಕರಣದಲಿ ರಾಜಕೀಯ ತರುವುದು ಸರಿಯಲ್ಲ. ಆರೋಪಿಗಳಿಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು.
ಸ್ಪೀಕರ್ ಸ್ಥಾನದಲ್ಲಿರುವವರು ಕೊಲೆ ಪ್ರಕರಣದ ತನಿಖೆಯ ಮುಂಚೆಯೇ ಗಡಿಬಿಡಿ ಮಾಡಿ ಹೇಳಿಕೆ ನೀಡುವ ಅಗತ್ಯ ಏನಿತ್ತು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸದಾಶಿವ ಉಳ್ಳಾಲ್, ಫಾಝಿಲ್ ತಂದೆ ಈ ಪ್ರಕರಣವನ್ನು ದೇವರಿಗೆ ಬಿಟ್ಟಿದ್ದೇನೆ, ನಮ್ಮ ಕುಂಟುಂಬ ಭಾಗಿಯಾಗಿಲ್ಲ ಎಂದು ಖಾದರ್ ಅವರಿಗೆ ಹೇಳಿರಬಹುದು ಎಂದು ಹೇಳಿದಾಗ ಇವರೊಂದಿಗೆ ಧ್ವನಿಗೂಡಿಸಿದ ಜಿಲ್ಲಾ ಕಾಂಗ್ರೆಸ್ ವಕ್ತಾರ ದಿನೇಶ್ ಕುಂಪಲ, ಬಿಜೆಪಿಯವರು ಹೇಳಿದ ಹಾಗೆ ಏನೂ ತನಿಖೆ ನಡೆಯುತ್ತಿಲ್ಲವಾಗಿದ್ದರೆ ಈ ಪ್ರಕರಣ ಹೊರಗೆ ಬರುತ್ತಿರಲ್ಲಿ, ಸ್ಪೀಕರ್ ಯಾರನ್ನೂ ರಕ್ಷಣೆ ಮಾಡಲು ಹೋಗಿಲ್ಲ, ಗ್ರಾ.ಪಂ. ಸದಸ್ಯನಾಗಿದ್ದ ಕುಂಪಲ ಯಾವ ಯಾವ ಹಗರಣ ಮಾಡಿದ್ದಾರೆ ಎಂದು ನನಗೆ ಗೊತ್ತು, ಅವರು 20 ಲಕ್ಷ ಬಾವಿಯನ್ನೇ ನುಂಗಿದ ಆರೋಪ ಲೋಕಾಯುಕ್ತದಲ್ಲಿ ಉಂಟು ಎಂದು ಹೇಳಿದರು.
ಆಗ ಪತ್ರಕರ್ತರು, ಕುಡುಪುವಿನಲ್ಲಿ ಗುಂಪು ಹತ್ಯೆಯಾದಾಗ ಸ್ಪೀಕರ್ ಯಾಕೆ ಮೌನವಾಗಿದ್ದರು ಎಂದು ಪ್ರಶ್ನಿಸಿದಾಗ, ಉತ್ತರಿಸಿದ ಸದಾಶಿವ ಉಳ್ಳಾಲ್, ನಾವು ಆರೋಪಿಗಳನ್ನು ಬಂಧಿಸಬೇಕೆಂದು ಪೊಲೀಸರಿಗೆ ಒತ್ತಡ ಹೇರಿದ್ದೆವು. ಕಾಂಗ್ರೆಸ್ ಆಗಲೀ, ಸ್ಪೀಕರ್ ಆಗಲೀ ಯಾರನ್ನೂ ರಕ್ಷಣೆ ಮಾಡಲು ಹೋಗುವುದಿಲ್ಲ. ಪೊಲೀಸರ ತನಿಖೆಗೆ ಖಾದರ್ ಫ್ರೀಹ್ಯಾಂಡ್ ಕೊಟ್ಟಿದ್ದಾರೆ ಎಂದರು.
ಮೊನ್ನೆ ಅಸೆಂಬ್ಲಿ ಚುನಾವಣೆಯಲ್ಲಿ ಕುಂಪಲ ಏನು ಮಾಡಿದರು? ಅವರ ಯೋಗ್ಯತೆ ಏನೆಂದು ತಿಳಿದುಕೊಳ್ಳಬೇಕು. ಜಾತಿ ರಾಜಕಾರಣ ಮಾಡಿದ್ದಲ್ಲದೆ, ಮುಸ್ಲಿಮರೊಂದಿಗೆ ಸೇರಿಕೊಂಡಿಲ್ವಾ? ಎಸ್‌ಡಿಪಿಐ ಜೊತೆ ಸೇರಿಕೊಂಡು ಖಾದರ್ ಸೋಲಿಸಲು ಒಳ ಒಪ್ಪಂದ ಮಾಡಿಲ್ವಾ? ನಮಗೆ ಎಲ್ಲಾ ಗೊತ್ತಿದೆ. ನಮ್ಮ ಊರಿನ ಜನ ಅಂತ ಅವರಿಗೆ ಒಂದು ಗೌರವ ಕೊಟ್ಟಿದ್ದೇವೆ ಎಂದರು. ಯಾರೊಂದಿಗೆ ಒಳ ಒಪ್ಪಂದ ಮಾಡಿದರು ಎಂದು ಪತ್ರಕರ್ತರು ಮರುಪ್ರಶ್ನಿಸಿದಾಗ ತಡವರಿಸಿದ ಸದಾಶಿವ ಉಳ್ಳಾಲ್, ಅದು ಯಾರೊಂದಿಗೆ ಎಂದು ಊರವರಿಗೆ ಗೊತ್ತಿದೆ. ಸತೀಶ್ ಕುಂಪಲ ಆತ್ಮಸಾಕ್ಷಿಗನುಗುಣವಾಗು ಮಾತನಾಡಬೇಕು ಎಂದು ಆತ್ಮಸಾಕ್ಷಿಗನುಗುಣವಾಗಿ ಮಾತಾಡ್ಬೇಕು ಎಂದು ಆರೋಪಿಸಿದರು.
ಬೊಳಿಯಾರ್ ಬ್ಲಾಕ್ ಪ್ರೆಸಿಡೆಂಟ್ ರಮೇಶ್ ಶೆಟ್ಟಿ, ಸೋಮೇಶ್ವರ ಪುರಸಭೆ ಸದಸ್ಯ ದೀಪಕ್ ಪಿಲಾರ್, ಮುಡ ಸದಸ್ಯರಾದ ನೀರಜ್ ಪಾಲ್, ಉಳ್ಳಾಲ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ರಕ್ಷಿತ್ ಪೂಜಾರಿ ಇದ್ದರು.