ಬೆಂಗಳೂರು: ರಾಜ್ಯದಲ್ಲಿ ಮೂರನೇ ಬಾರಿ ಮದ್ಯದ ಬೆಲೆ ಏರಿಕೆ ಮಾಡಲು ಸರ್ಕಾರ ತೀರ್ಮಾನಿಸಿದೆ. ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ ಐಎಂಎಲ್ ಹಾಗೂ ಬಿಯರ್‌ನ ಸ್ಲಾಬ್‌ಗಳನ್ನು ಪರಿಷ್ಕರಿಸಲು ಸರ್ಕಾರ ಮುಂದಾಗಿದೆ.
ಮುಂದಿನ ವಾರದಲ್ಲಿ ಹೊಸ ದರ ಜಾರಿಗೆ ತರಲು ಅಬಕಾರಿ ಇಲಾಖೆ ಸಿದ್ದತೆ ನಡೆಸುತ್ತಿದೆ. ಮದ್ಯದ 16 ಸ್ಲ್ಯಾಬ್ಗಳಲ್ಲಿ 1 ರಿಂದ 4 ಸ್ಲ್ಯಾಬ್ಗಳ ಮೇಲೆ ದರ ಏರಿಕೆಗೆ ಮುಂದಾಗಿದ್ದು, ಸ್ಯ್ಲಾಬ್-1, ಸದ್ಯ 80 ರೂಪಾಯಿ ಇದ್ದು ಅದರ ಮೇಲೆ 10 ರೂಪಾಯಿ ಏರಿಕೆ ಆಗಲಿದೆ. ಸ್ಲ್ಯಾಬ್- 2, 155 ರೂಪಾಯಿ ಇದ್ದು ಅದರ ಮೇಲೆ 15 ರೂಪಾಯಿ ಏರಿಕೆ ಆಗಲಿದೆ. ಸ್ಲ್ಯಾಬ್- 3, 185 ರೂಪಾಯಿ ಇದ್ದು ಅದರ ಮೇಲೆ 15 ರಿಂದ 20 ರೂಪಾಯಿ ಏರಿಕೆ ಆಗಲಿದೆ. ಸ್ಲ್ಯಾಬ್- 4, 235 ರೂಪಾಯಿ ಇದ್ದು ಅದರ ಮೇಲೆ 20 ರಿಂದ 25 ರೂಪಾಯಿ ಏರಿಕೆ ಆಗಲಿದೆ. 2024-25 ರಲ್ಲಿ ಅಬಕಾರಿ ಇಲಾಖೆಗೆ ರಾಜ್ಯ ಸರ್ಕಾರ ಬರೋಬ್ಬರಿ 38,600 ಕೋಟಿ ರೂಪಾಯಿ ಟಾರ್ಗೆಟ್ ನೀಡಿತ್ತು. ಈ ಸಾಲಿನಲ್ಲಿ ಹೆಚ್ಚುವರಿಯಾಗಿ 1400 ಕೋಟಿ ರೂಪಾಯಿ ಟಾರ್ಗೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯ ಎಂದು ಅಬಕಾರಿ ಇಲಾಖೆ ದರ ಏರಿಕೆಗೆ ರೂಪುರೇಷೆಗಳನ್ನು ಮಾಡುತ್ತಿದೆ.
ಹೊರರಾಜ್ಯಕ್ಕಿಂತ ಮದ್ಯದ ಬೆಲೆ ಕಡಿಮೆ ಇದೆ: ತಿಮ್ಮಾಪುರ್ ಸಮರ್ಥನೆ
ಇದೆಲ್ಲದರ ನಡುವೆ ರಾಜ್ಯದಲ್ಲಿ ಮದ್ಯದ ಬೆಲೆ ಏರಿಕೆಯಾಗಿರುವುದು ನಿಜ, ಆದರೆ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಪೋರ್ಸ್ ಸ್ಲ್ಯಾಬ್ ಗಿಂತ ರಾಜ್ಯದಲ್ಲಿ ದರ ಕಡಿಮೆ ಇದೆ, ಪ್ರೀಮಿಯಂ ಬ್ರ್ಯಾಂಡ್ ದರ ಏರಿಕೆ ಮಾಡಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸ್ವಲ್ಪ ಬೀಯರ್ ಬೆಲೆ ಹೆಚ್ಚಿಸಲಾಗಿದೆ, ಬಾಟಲ್‌ಗೆ ₹10 ಹೆಚ್ಚಳವಾಗಿದೆ, ನೆರೆ ರಾಜ್ಯಗಳಿಗಿಂತ ನಮ್ಮಲ್ಲಿ ಬೆಲೆ ಇನ್ನೂ ಕಡಿಮೆ ಇದೆ, ನಾವು ಬೀಯರ್ ಬೆಲೆ ಮಾತ್ರ ಏರಿಕೆ ಮಾಡಿದ್ದೇವೆ ಎಂದು ಹೇಳಿದರು.
ಮದ್ಯ ದರ ಹೆಚ್ಚಳ ಪ್ರಸ್ತಾವ ಕೈಬಿಡಿ:
ಸರ್ಕಾರಕ್ಕೆ ವೈನ್ ಮರ್ಚೆಂಟ್ಸ್ ಆಗ್ರಹ
ಮದ್ಯದ ದರ ಹೆಚ್ಚಳ ಪ್ರಸ್ತಾವವನ್ನು ಸರ್ಕಾರ ಕೈಬಿಡಬೇಕು ಎಂದು ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಈ ಬಗ್ಗೆ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ ಅವರು ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಐಎಂಎಲ್ ಮದ್ಯ ಮತ್ತು ಬಿಯರ್ ಮೇಲೆ ಹೆಚ್ಚುವರಿ ಅಬಕಾರಿ ಶುಲ್ಕ ವಿಧಿಸುವಾಗ ವೈಜ್ಞಾನಿಕ ಮಾನದಂಡ ಅಳವಡಿಸಿಕೊಳ್ಳಬೇಕು. ಅಬಕಾರಿ ಅಧಿಕಾರಿಗಳ ನಿರ್ಲಕ್ಷ್ಯತೆಗೆ ಸನ್ನದುದಾರ ಮತ್ತು ಗ್ರಾಹಕ ಬಲಿ ಆಗಬಾರದು ಎಂದು ಮನವಿ ಮಾಡಿದ್ದಾರೆ. ಮದ್ಯದ ದರ ಹೆಚ್ಚಳವಾದರೆ ಅಕ್ಕಪಕ್ಕದ ರಾಜ್ಯಗಳಿಂದ ನಕಲಿ ಮದ್ಯ ರಾಜ್ಯ ಪ್ರವೇಶಿಸುವ ಸಾಧ್ಯತೆ ಇದ್ದು ದರ ಹೆಚ್ಚಳದ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕು. ಚಿಲ್ಲರೆ ಮದ್ಯ ಮಾರಾಟಗಾರರು ಗ್ರಾಹಕರ ಜೊತೆ ಸಂವಹನ ನಡೆಸುವುದರಿಂದ ಚಿಲ್ಲರೆ ಮದ್ಯ ಮಾರಾಟಗಾರರ ಸಭೆ ಕರೆದು ಅಭಿಪ್ರಾಯ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.