ನವದೆಹಲಿ: ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಮೇ 7ರಂದು ದೇಶಾದ್ಯಂತ ಮಾಕ್ ಡ್ರಿಲ್ ನಡೆಸುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದೆ. ಕೇಂದ್ರ ಗೃಹ ಸಚಿವಾಲಯ ಇಂದು ಆದೇಶ ನೀಡಿದ್ದು, ನಾಗರಿಕರ ರಕ್ಷಣೆಯ ಸಂಬಂಧ ಮೇ 7ರಂದು ದೇಶಾದ್ಯಂತ ಅಣಕು ಪ್ರದರ್ಶನ ಮಾಡಿಸಿ. ಎಲ್ಲಾ ರಾಜ್ಯಗಳಲ್ಲಿ ವಾಯುದಾಳಿಯ ಸೈರನ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಎಲ್ಲ ರಾಜ್ಯಗಳಲ್ಲೂ ಯುದ್ಧದ ಸಮಯದಲ್ಲಿ ನಡೆಸಲಾಗುವ ರಕ್ಷಣಾ ಕಾರ್ಯದ ಅಣಕು ಕವಾಯತು ನಡೆಯಲಿದೆ.
ದಾಳಿಯ ಸಂದರ್ಭದಲ್ಲಿ ಸಿದ್ಧತೆಯನ್ನು ಪರೀಕ್ಷಿಸಲು ಮತ್ತು ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಲು ಮೇ 7ರ ಬುಧವಾರ ಸಮಗ್ರ ನಾಗರಿಕ ರಕ್ಷಣಾ ಅಣಕು ಕಸರತ್ತುಗಳನ್ನು ನಡೆಸುವಂತೆ ಗೃಹ ಸಚಿವಾಲಯ ರಾಜ್ಯಗಳಿಗೆ ನಿರ್ದೇಶನ ನೀಡಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ತುರ್ತು ಸಂದರ್ಭದಲ್ಲಿ ನಾಗರಿಕರನ್ನು ಹೇಗೆ ರಕ್ಷಿಸಬೇಕು ಎಂದು ಅಣಕು ಕಾರ್ಯಾಚರಣೆ ನಡೆಯಲಿದೆ. ಇದರಿಂದ ಸದ್ಯದಲ್ಲೇ ಭಾರತ ಮತ್ತು ಪಾಕ್ ನಡುವೆ ಯುದ್ಧ ನಡೆಯಲಿದೆಯೇ ಎಂಬ ಕುತೂಹಲ ಶುರುವಾಗಿದೆ.