ಸಫ್ವಾನ್‌ ಗ್ಯಾಂಗ್‌ನಿಂದ ಸುಹಾಸ್‌ ಶೆಟ್ಟಿ ಕೊ*ಲೆ, ಫಾಝಿಲ್‌ ಸಹೋದರನೂ ಶಾಮೀಲು: 5 ಲಕ್ಷ ರೂ. ಕಿಲ್ಲಿಂಗ್‌ ಕಾಂಟ್ರ್ಯಾಕ್ಟ್!

ಮಂಗಳೂರು: ಬಜ್ಪೆ ಕಿನ್ನಿಪದವು ಎಂಬಲ್ಲಿ ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಕೊ*ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ‌ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಕೊಲೆಯ ಹಿಂದೆ ಕಳವಾರು ಶಾಂತಿಗುಡ್ಡೆ ನಿವಾಸಿ ನಟೋರಿಯಸ್‌ ಕ್ರಿಮಿನಲ್‌ ಆರೋಪಿ ಅಬ್ದುಲ್ ಸಫ್ವಾನ್ ಗ್ಯಾಂಗ್‌ ಇರುವುದು ಸಾಬೀತಾಗಿದೆ. ಅಲ್ಲದೆ ಹ*ತ್ಯೆಗೀಡಾದ ಫಾಝಿಲ್‌ ಸಹೋದರ ಅದಿಲ್‌ ಮೆಹರೂಫ್‌ ಕೂಡಾ ಶಾಮೀಲಾಗಿದ್ದಲ್ಲದೆ, ಈತ ಸಫ್ವಾನ್‌ಗೆ 5 ಲಕ್ಷ ರೂ ಕಿಲ್ಲಿಂಗ್ ಕಾಂಟ್ರ್ಯಾಕ್ಟ್‌ ನೀಡಿದ್ದ ಎನ್ನುವುದೂ ಬಹಿರಂಗಗೊಂಡಿದೆ.

ಹಂತಕರು ಯಾರ್ಯಾರು?

1. ಅಬ್ದುಲ್ ಸಫ್ವಾನ್ ( ಶಾಂತಿಗುಡ್ಡೆ ನಿವಾಸಿ, 29ವರ್ಷ, ಡ್ರೈವರ್ ಕೆಲಸ )
2. ನಿಯಾಜ್ (ಶಾಂತಿಗುಡ್ಡೆ ನಿವಾಸಿ, 28 ವರ್ಷ, ಮೇಸ್ತ್ರಿ ಹೆಲ್ಪರ್ ಕೆಲಸ )
3. ಮೊಹಮ್ಮದ್ ಮುಝಮಿಲ್ ( ಕೆಂಜಾರು ಅಪಾರ್ಟ್ಮೆಂಟ್ ನಿವಾಸಿ, 32 ವರ್ಷ, 4 ತಿಂಗಳ ಹಿಂದೆ ಸೌದಿ ಅರೇಬಿಯಾ ದಲ್ಲಿ ಸೇಲ್ಸ್ ಮ್ಯಾನ್ ಆಗಿ, 4 ತಿಂಗಳ ಹಿಂದೆ ಮದುವೆಯಾಗಿದ್ದ)
4. ಕಲಂದರ್ ಶಾಫಿ (31 ವರ್ಷ, ಕುರ್ಸು ಗುಡ್ಡೆ ನಿವಾಸಿ, ಬೆಂಗಳೂರಿನಲ್ಲಿ ಸೇಲ್ಸ್ ಮ್ಯಾನ್ )
5. ರಂಜಿತ್ (19 ವರ್ಷ, ಚಿಕ್ಕಮಗಳೂರು ನಿವಾಸಿ, ಡ್ರೈವಿಂಗ್ ಕೆಲಸ )
6. ನಾಗರಾಜ್ (20 ವರ್ಷ, ಚಿಕ್ಕಮಗಳೂರು ನಿವಾಸಿ, ಶಾಮಿಯಾನ ಅಂಗಡಿಯಲ್ಲಿ ಕೆಲಸ )
7. ಮೊಹಮ್ಮದ್ ರಿಜ್ವಾನ್ (28 ವರ್ಷ, ಜೋಕಟ್ಟೆ ಮಂಗಳೂರು ನಿವಾಸಿ, ಸೌದಿ ಅರೇಬಿಯಾ ಆಯಿಲ್ ಪ್ಲಾಂಟ್ ಶಟ್ ಡೌನ್ ಕೆಲಸ)
8. ಅದಿಲ್‌ ಮೆಹರೂಫ್‌ (ಫಾಝಿಲ್ ಸಹೋದರ)

ಕೊಲೆ ಮಾಡಿದ್ದು ಯಾಕೆ?

ಸುಹಾಸ್‌ ಶೆಟ್ಟಿಯನ್ನು ಕೊಲೆ ಮಾಡಿದ್ದು ಯಾಕೆ ಎನ್ನವುದನ್ನು ಹಂತಕರು ಬಾಯ್ಬಿಟ್ಟಿದ್ದಾಗಿ ಕಮೀಷನರ್‌ ಮಾಹಿತಿ ನೀಡಿದ್ದಾರೆ.
ಅಬ್ದುಲ್‌ ಸಫ್ವಾನ್ ಮೇಲೆ 2023 ರಲ್ಲಿ ಮಾರಣಾಂತಿಕ ಹಲ್ಲೆ ನಡೆದಿತ್ತು. ಸುಹಾಸ್‌ ಶೆಟ್ಟಿ ಸ್ನೇಹಿತರಾದ ಪ್ರಶಾಂತ್, ಧನರಾಜ್ ಸೇರಿ ಸಫ್ವಾನ್‌ ಮೇಲೆ ಹಲ್ಲೆ ಮಾಡಿದ್ದರು. ಸುಹಾಸ್ ತನ್ನನ್ನು ಕೊಲೆ ಮಾಡಬಹುದು ಎನ್ನುವ ಭಯ ಸಫ್ವಾನ್‌ಗೆ ಕಾಡುತ್ತಿತ್ತು. ಹೀಗಾಗಿ ಸುಹಸ್‌ನನ್ನು ಕೊಲೆ ಮಾಡುವ ತೀರ್ಮಾನ ಮಾಡಿ ಫಾಝಿಲ್‌ ತಮ್ಮ ಆದಿಲ್‌ನನ್ನು ಸಂಪರ್ಕಿಸಿ ಕೊಲೆ ಮಾಡಲು ತೀರ್ಮಾನ ಮಾಡುತ್ತಾರೆ.
ಅದಿಲ್‌ ಮೆಹರೂಫ್‌ ಸುಹಾಸ್ ಕೊಲೆಗೆ ಐದು ಲಕ್ಷ ರೂಪಾಯಿ ಹಣವನ್ನು ಸಫ್ವಾನ್ ತಂಡಕ್ಕೆ ನೀಡಿದ್ದಾನೆ. ನಿಯಾಜ್ ತನ್ನಿಬ್ಬರು ಸ್ನೇಹಿತರಾದ ಚಿಕ್ಕಮಗಳೂರಿನ ನಾಗಾರಾಜ್ ಮತ್ತು ರಂಜಿತ್‌ನನ್ನು ಸಂಪರ್ಕ ಮಾಡಿ ಮಂಗಳೂರಿಗೆ ಬರುವಂತೆ ಹೇಳಿದ್ದಾರೆ. ಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳಿಂದ ವಾಸ ಮಾಡಿ, ಮೇ 1 ರಂದು ಸುಹಾಸ್ ಚಲನವಲನಗಳನ್ನು ಗಮನಿಸಿ ಕೊಲೆ ಮಾಡಿದ್ದಾರೆ. ಚಿಕ್ಕಮಗಳೂರಿನ ರಂಜಿತ್ ಹಾಗೂ ನಾಗರಾಜ್ ಕಿಲ್ಲಿಂಗ್‌ ಕಾಂಟ್ರ್ಯಾಕ್ಟ್‌ ನೀಡಿ ನೇಮಕ ಮಾಡಲಾಗಿತ್ತು ಎಂದು ಅಗರ್ವಾಲ್‌ ಹೇಳಿದ್ದಾರೆ.

ವಿಡಿಯೋದಲ್ಲಿ ಕಾಣಿಸಿದ ಬುರ್ಖಾಧಾರಿ ಮಹಿಳೆಯರು ನಿಯಾಜ್ ಸಂಬಂಧಿಗಳು ಎಂಬ ಮಾಹಿತಿ ಲಭ್ಯವಿದ್ದು, ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಕಮಿಷನರ್‌ ಹೇಳಿದ್ದಾರೆ.

ಕರಾವಳಿಯಲ್ಲಿ ಕೋಮು ನಿಗ್ರಹ ಪಡೆ: ಗೃಹಸಚಿವರು  

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಕೃತ್ಯದಲ್ಲಿ ಭಾಗವಹಿಸಿದ ಎಂಟು ಜನರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ, ಈಗ ಅವರೆಲ್ಲರೂ ಈಗ ಪೊಲೀಸ್ ಕಸ್ಡಡಿಯಲ್ಲಿ ಇದ್ದಾರೆ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ನಡೀತಾ ಇದೆ. ಸಿಕ್ಕಿದ ಎಂಟು ಜನರ ತನಿಖೆ ಆಗ್ತಿದೆ. ಸುಹಾಸ್ ಶೆಟ್ಟಿ ಘಟನೆ ಮತ್ತು ನಾಲ್ಕು ದಿನದ ಹಿಂದಿನ ಅಶ್ರಫ್ ಕೊಲೆ ಮತ್ತೆ ಇಲ್ಲಿ ಕೋಮು ಸೌಹಾರ್ದಕ್ಕೆ ಸವಾಲಾಗಿದೆ. ಸುಹಾಸ್ ಶೆಟ್ಟಿ ಕೇಸ್ ನಲ್ಲಿ ಎಂಟು ಜನರು‌ ಹಾಗೂ ಅಶ್ರಫ್ ಕೇಸ್ ನಲ್ಲಿ 21 ಜನರ ಬಂಧನ ಆಗಿದೆ. ನಾವು ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಶಾಂತಿ ಹಾಳು ಮಾಡಲು ಬಿಡಲ್ಲ ಎಂದಿದ್ದಾರೆ. ಅಲ್ಲದೆ ಕರಾವಳಿಯಲ್ಲಿ ಕೋಮು ನಿಗ್ರಹ ಪಡೆ ಸ್ಥಾಪಿಸುವುದಾಗಿ ಹೇಳಿದ್ದಾರೆ.

error: Content is protected !!