ಮಂಗಳೂರು: ಕೋಮುಗಲಭೆ ನಿಗ್ರಹಕ್ಕೆ ಕರಾವಳಿಯಲ್ಲಿ ಆ್ಯಂಟಿ ಕಮ್ಯುನಲ್ ಟಾಸ್ಕ್ ಫೋರ್ಸ್ ರಚನೆ ಮಾಡುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಸುಹಾಸ್ ಶೆಟ್ಟಿ ಹ*ತ್ಯೆ ಬೆನ್ನಲ್ಲೇ ಮಂಗಳೂರಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಇದು ಯಾರು ಕಮ್ಯೂನಲ್ ಚಟುವಟಿಕೆಗಳನ್ನು ಮಾಡುತ್ತಾರೋ, ಅವರಿಗೆ ಸಪೋರ್ಟ್ ಮಾಡುತ್ತಾರೋ ಹಾಗೂ ಪ್ರಚೋದನಕಾರಿ ಭಾಷಣ ಮಾಡುತ್ತಾರೋ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಕ್ಕೆ ಈ ಪಡೆಯ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗುತ್ತಿದೆ ಎಂದು ಡಾ.ಜಿ. ಪರಮೇಶ್ವರ ಹೇಳಿದ್ದಾರೆ.
ಸುಹಾಸ್ ಕೊಲೆಯಲ್ಲಿ ಭಾಗಿಯಾದ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸುಮಾರು ವರ್ಷದಿಂದ ಕೋಮುವಾದ ಹಿನ್ನೆಲೆಯಲ್ಲಿ ರಾಷ್ಟ್ರದ ಗಮನ ಸೆಳೆದಿದೆ. ಈ ಬಾರಿಯೂ ಈ ಘಟನೆ ಆದ್ಮೇಲೆ ದ.ಕ., ಉಡುಪಿಯಲ್ಲಿ ಮತ್ತೆ ಮರುಕಳಿಸಿದೆ ಅನ್ನೋ ಅಭಿಪ್ರಾಯ ಮೂಡಿದೆ. ಈ ಘಟನೆಯನ್ನು ಜನಸಮುದಾಯ ಇಷ್ಟ ಪಡೋದಿಲ್ಲ. ಸುಹಾಸ್ ಹಾಗೂ ಅಶ್ರಫ್ ಕೊಲೆಯಿಂದ ಜಿಲ್ಲೆಯ ಕೋಮುಸೌಹಾರ್ದಕ್ಕೆ ಧಕ್ಕೆಯಾಗಿದೆ. ಸುಹಾಸ್ ಕೊಲೆಯಲ್ಲಿ 8 ಜನ, ಅಶ್ರಫ್ ಕೊಲೆಯಲ್ಲಿ 21 ಜನ ಆರೋಪಿಗಳನ್ನು ಬಂಧಿಸಿದ್ದೇವೆ. ಯಾರನ್ನೂ ಕಾನೂನು ಉಲ್ಲಂಘನೆ ಮಾಡಲು ಬಿಡೋದಿಲ್ಲ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಶಾಂತಿಯಿಂದ ಇರಬೇಕು. ಹಿಂದೆ ಈ ಜಿಲ್ಲೆಯಲ್ಲೂ ಶಾಂತಿಗಾಗಿ ನಾವು ಪಾದಯಾತ್ರೆ ನಡೆಸಿದ್ದೆವು. ಸರ್ಕಾರ ಒಂದು ತೀರ್ಮಾನಕ್ಕೆ ಬಂದಿದೆ. ಇನ್ಮುಂದೆ ಇಂತಹ ಘಟನೆಗಳು ಮರುಕಳಿಸಬಾರದೆಂದು ನಾವು ಹೊಸದಾಗಿ ಒಂದು ಆ್ಯಂಟಿ ಕಮ್ಯುನಲ್ ಫೋರ್ಸ್ ಅನ್ನು ಪ್ರತ್ಯೇಕವಾಗಿ ಮಾಡ್ತೇವೆ. ಆ್ಯಂಟಿ ನಕ್ಸಲ್ ಫೋರ್ಸ್‌ನಂತೆ ಪ್ರತ್ಯೇಕವಾಗಿ ಈ ಕೋಮುವಾದ ನಿಗ್ರಹ ಪಡೆ ಕೆಲಸ ಮಾಡುತ್ತೆ ಎಂದು ಮಾಹಿತಿ ನೀಡಿದರು.
ಟಾಸ್ಕ್‌ಪೋರ್ಸ್ ಕೆಲಸವೇನು?
ಯಾರು ಕೋಮುವಾದದ ಕೆಲಸ ಹಾಗೂ ಹಿಂದಿನಿಂದ ಯಾರು ಕೆಲಸ ಮಾಡ್ತಾರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳಲು ಈ ಫೋರ್ಸ್ ಸಂಪೂರ್ಣ ಅನುಮತಿ ನೀಡ್ತೇವೆ. ಈ ಎರಡು ಜಿಲ್ಲೆಗಳಲ್ಲಿ ಈ ಫೋರ್ಸ್ ಕೆಲಸ ಮಾಡ್ತದೆ. ಯಾರು ಈ ಜಿಲ್ಲೆಯಲ್ಲಿ ಕಮ್ಯುನಲ್ ಭಾಷಣ ಮಾಡ್ತಾರೋ ಅವರ ವಿರುದ್ಧವೂ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಅಧಿಕಾರ ನೀಡಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಶಾಂತಿಯಿಂದ ಇರಬೇಕು. ಜನರೂ ಇಲ್ಲಿಗೆ ಬರಬೇಕು. ಅದಕ್ಕೆ ಬೇಕಾದ ಎಲ್ಲಾ ಕೆಲಸಗಳನ್ನು ಮಾಡ್ತೇವೆ. ಎರಡು ಜಿಲ್ಲೆಯಲ್ಲಿ ಮಾತ್ರ ಈ ಕೋಮುವಾದ ನಿಗ್ರಹ ಪಡೆ ಕೆಲಸ ಮಾಡ್ತದೆ. ಐಜಿಪಿ ನೇತೃತ್ವದಲ್ಲಿ ಕೆಲಸ ಮಾಡ್ತದೆ ಎಂದು ಸ್ಪಷ್ಟಪಡಿಸಿದರು.
ಯಾರೇ ಆಗಲಿ ಯಾವುದೇ ಪಕ್ಷವಾಗಲಿ ಯಾವುದೇ ಧರ್ಮದವರಾಗಲಿ ಕೋಮುಭಾವನೆ ಕೆಡಿಸೋ ಹೇಳಿಕೆ ನೀಡಿದ್ರೆ ಕ್ರಮಕೈಗೊಳ್ತೇವೆ. 8 ಆರೋಪಿಗಳು ಏನು ಹೇಳಿಕೆ ನೀಡ್ತಾರೋ ಆಗ ಕೊಲೆಯ ಕಾರಣ ಗೊತ್ತಾಗುತ್ತದೆ ಎಂದರು.
ಕಾರ್ಕಳದಲ್ಲಿ ಈಗಾಗಲೇ ಇರುವ ಆಂಟಿ ನಕ್ಸಲ್ ಕಾರ್ಯಪಡೆಯ ಮಾದರಿಯಲ್ಲಿಯೇ ಇದೀಗ ಕರಾವಳಿ ಭಾಗದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಂಟಿ ಟಾಸ್ಕ್ ಫೋರ್ಸ್ ಆಗಿ ಮಾಡಲಾಗುವುದು. ಇದೀಗ ರಾಜ್ಯದಲ್ಲಿ ಎಲ್ಲ ನಕ್ಸಲ್ ಚಟುವಟಿಕೆ ಸಂಪೂರ್ಣವಾಗಿ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಕಳ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಕ್ಸಲ್ ನಿಗ್ರಹ ಪಡೆಯನ್ನು ರದ್ದುಗೊಳಿಸಿ, ಅದರಲ್ಲಿರುವ ಅಧಿಕಾರಿಗಳನ್ನೇ ಕೋಮುವಾದಿ ನಿಗ್ರಹ ದಳವನ್ನಾಗಿ ಮಾಡಲಾಗುವುದು.
ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ ಜಿಲ್ಲೆಗಳನ್ನು ಅತಿ ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿಸಲಾಗಿದೆ. ಜೊತೆಗೆ ಶಿವಮೊಗ್ಗ, ಬಾಗಲಕೋಟೆ, ವಿಜಯಪುರ, ಬೆಂಗಳೂರು, ತುಮಕೂರು, ಕೋಲಾರ ಜಿಲ್ಲೆಗಳಲ್ಲಿಯೂ ಈ ಹಿಂದೆ ಕೋಮು ಗಲಭೆಗಳು ನಡೆಯುವ ಸಾಧ್ಯತೆಗಳೂ ಇರುವ ಹಿನ್ನೆಲೆಯಲ್ಲಿ ಇವುಗಳನ್ನು ಸೂಕ್ಷ ಪ್ರದೇಶಗಳೆಂದು ಪರಿಗಣಿಸಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. ಇನ್ನು ಪ್ರತಿಭಟನೆಗಳು, ರ್ಯಾಲಿಗಳು ಅಥವಾ ಜನಜಂಗುಳಿ ಸೇರಿದ ಸಂದರ್ಭದಲ್ಲಿ ಪೊಲೀಸರು ಕಡ್ಡಾಯವಾಗಿ ಎಲ್ಲರ ಮೇಲೂ ನಿಗಾವಹಿಸುವಂತೆ ಸೂಚಿಸಲಾಗಿದೆ.
ಸೋಷಿಯಲ್ ಮೀಡಿಯಾಗಳ ಬಗ್ಗೆ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಸ್ಪೆಷಲ್ ಸೈಬರ್ ಟೀಂ ನಿಗಾವಹಿಸಬೇಕು. ಪ್ರಚೋದನಕಾರಿ ಬರಹ, ಪ್ರಚೋದನೆ ಕೊಡುವ ರೀತಿಯಲ್ಲಿ ಮಾತನಾಡುವ ಬಗ್ಗೆ ಮಾಹಿತಿ ಕಲೆಹಾಕಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಬೀಟ್ ವ್ಯವಸ್ಥೆ ಮಾಡಿಕೊಂಡು ಗಸ್ತು ತಿರುಗಬೇಕು. ರಾತ್ರಿ ಪಾಳಿಯಲ್ಲಿ ಗಸ್ತು ಹೆಚ್ಚಳಕ್ಕೆ ಹಿರಿಯ ಅಧಿಕಾರಿಗಳು ಸೂಚಿಸಬೇಕು. ಬೆಂಗಳೂರಿನಲ್ಲಿ 8 ವಿಭಾಗದ ಎಲ್ಲಾ ಸೂಕ್ಣ್ಮ ಪ್ರದೇಶದಲ್ಲಿ ಪೊಲೀಸರು ಬಂದೋಬಸ್ತ್ ಕೈಗೊಳ್ಳಬೇಕು. ಮುಖ್ಯವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಪ್ರತಿಭಟನೆ ರ್ಯಾಲಿಗೆ ಅವಕಾಶ ಕೊಡದಂತೆ ಸೂಚನೆ ನೀಡಲಾಗಿದೆ ಎಂದರು.