ಮಂಗಳೂರು:ಬಜ್ಪೆಯ ಕಿನ್ನಿಪದವಿನಲ್ಲಿ ಮತೀಯವಾದಿಗಳಿಂದ ಹತ್ಯೆಯಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಸಾವಿನಿಂದ ಪೂರ್ತಿ ದಕ್ಷಿಣ ಕನ್ನಡ ಜಿಲ್ಲೆಯೇ ಸ್ತಬ್ದವಾಗಿತ್ತು. ಈ ನಡುವೆ ರಾಜ್ಯ ಗೃಹ ಮಂತ್ರಿಗಳಾದ ಡಾ. ಜಿ ಪರಮೇಶ್ವರ್ ಹಾಗೂ ದಕ್ಷಿಣ ಕನ್ನಡದ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ಜಿಲ್ಲೆಗೆ ಆಗಮಿಸಿದ ತಕ್ಷಣ ಮುಸ್ಲಿಮ್ ಮುಖಂಡರುಗಳೊಂದಿಗೆ ಸಭೆ ನಡೆಸಿದ್ದಾರೆ.ಸ್ಥಳೀಯ ಸಂಸದರು,ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹೊರಗಿಟ್ಟು ಸಭೆ ನಡೆಸಿರುವುದು ಖಂಡನೀಯ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ. ಕಿಡಿಕಾರಿದ್ದಾರೆ.
ಹತ್ಯೆಯಾದ ಹಿಂದೂ ಕಾರ್ಯಕರ್ತನ ಸಾವಿಗೆ ನ್ಯಾಯ ನೀಡಬೇಕಾದ ಸರಕಾರವೇ ಹಿಂದೂ ನಾಯಕರನ್ನು ಹಾಗೂ ಚುನಾಯಿತ ಜನಪ್ರತಿನಿಧಿಗಳ ಜೊತೆ ಸಭೆ ನಡೆಸದೆ ಮುಸ್ಲಿಮ್ ಮುಖಂಡರ ಜೊತೆ ಸಭೆ ನಡೆಸಿ ನಿಮ್ಮ ಜೊತೆ ನಾವಿದ್ದೇವೆ ಎಂದು ಓಲೈಕೆ ರಾಜಕಾರಣವನ್ನು ಮುಂದುವರಿಸಿದ್ದಾರೆ. ಇಂತಹ ನಡೆಯಲ್ಲಿರುವ ಇವರುಗಳಿಂದ ಹಿಂದೂ ಸಮಾಜ ಹಾಗೂ ಮೃತ ಸುಹಾಸ್ ಶೆಟ್ಟಿಗೆ ನ್ಯಾಯ ದೊರಕಬಹುದು ಎಂಬುದನ್ನು ಹೇಗೆ ನಿರೀಕ್ಷೆ ಮಾಡಲು ಸಾಧ್ಯ. ಸ್ಥಳೀಯ ಸಂಸದರು, ಶಾಸಕರುಗಳಿಗೆ ಮಾಹಿತಿ ನೀಡದೆ ಕೇವಲ ಮುಸ್ಲಿಂ ಮುಖಂಡರನ್ನು ಕರೆಸಿ ಸಭೆ ನಡೆಸಲು ಕಾರಣ ಏನು ಎಂದವರು ಪ್ರಶ್ನಿಸಿದ್ದಾರೆ.