ಪಣಜಿ: ಇಂದು ಬೆಳಗಿನ ಜಾವ 4:45ರ ಸುಮಾರಿಗೆ ಗೋವಾದ ಕರಾವಳಿ ನಗರವಾದ ಶಿರ್ಗಾಂವ್‌ನಲ್ಲಿರುವ ದೇವಸ್ಥಾನದ ಲೈರಾಯಿ ದೇವಿಯ ಜಾತ್ರೆಯ ಸಂದರ್ಭ ಕಾಲ್ತುಳಿತ ಸಂಭವಿಸಿ 7 ಮಂದಿ ಭಕ್ತರು ಅಸುನೀಗಿದ್ದು, ಐವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಏಕಾಏಕಿ ವಿದ್ಯುತ್ ಆಘಾತ ಸಂಭವಿಸಿ ಕತ್ತಲು ಆವರಿಸಿದ್ದು, ಅಪಾರ ಸಂಖ್ಯೆಯಲ್ಲಿ ನೆರದಿದ್ದ ಭಕ್ತರು ಭಯದಿಂದ ದಿಕ್ಕಾಪಾಲಾಗಿ ಓಡಿ ಹೋಗಿದ್ದರಿಂದ ಈ ದುರಂತ ಸಂಭವಿಸಿದ್ದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಶಿರ್ಗಾಂವ್ ದೇವಸ್ಥಾನದಲ್ಲಿ ನಡೆದ ವಾರ್ಷಿಕ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಈ ವೇಳೆ ಜನಸಂದಣಿಯಲ್ಲಿ ಉಂಟಾದ ಭಯ ಮತ್ತು ನೂಕುನುಗ್ಗಲು ಕಾಲ್ತುಳಿತಕ್ಕೆ ಕಾರಣವಾಯಿತು. ಕಾಲ್ತುಳಿತಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಸೇರಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಒಂದು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಡಿಎಸ್‌ಪಿ ದರ್ಜೆಯ ಅಧಿಕಾರಿ ಭದ್ರತಾ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು. ಅಲ್ಲದೇ ಗೋವಾ ರಿಸರ್ವ್ ಪೊಲೀಸ್ ಫೋರ್ಸ್ ಕೂಡ ಸ್ಥಳದಲ್ಲಿತ್ತು. ಸಂಚಾರ ದಟ್ಟಣೆ ಆಗದಂತೆ ನೋಡಿಕೊಳ್ಳಲು 300ಕ್ಕೂ ಹೆಚ್ಚು ಸಂಚಾರ ಪೊಲೀಸರನ್ನು ನಿಯೋಜಿಸಲಾಗಿತ್ತು. ಡ್ರೋನ್ ಕ್ಯಾಮೆರಾಗಳ ಮೂಲಕ ಜನಸಂದಣಿಯ ಮೇಲೆ ನಿಗಾ ಇಡಲಾಗಿತ್ತು. ಗಲಭೆ ನಿಯಂತ್ರಣ ವಾಹನ ಕೂಡ ಸಿದ್ಧವಾಗಿತ್ತು. ಆದಾಗ್ಯೂ, ವಿದ್ಯುತ್ ಆಘಾತದಿಂದ ಭಯಭೀತರಾದ ಜನ ಏಕಾಎಕಿ ಸ್ಥಳದಿಂದ ಓಡಲಾರಂಭಿಸಿದ್ದರಿಂದ ಕಾಲ್ತುಳಿತ ಉಂಟಾಗಿ ಇಷ್ಟೆಲ್ಲಾ ಅವಘಡ ನಡೆಯಿತೆಂದು ಹೇಳಲಾಗಿದೆ.
ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಗೊಂಡವರನ್ನು ಗೋವಾ ವೈದ್ಯಕೀಯ ಕಾಲೇಜು ಮತ್ತು ಉತ್ತರ ಗೋವಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ್ದಾರೆ.
ಲೈರಾಯಿ ದೇವಿಯನ್ನು ಪಾರ್ವತಿ ದೇವಿಯ ಅವತಾರವೆಂದು ನಂಬಲಾಗಿದೆ. ಗೋವಾದ ಜಾನಪದದಲ್ಲಿ ಈ ದೇವಿ ಪ್ರಮುಖ ಸ್ಥಾನ ಹೊಂದಿದ್ದಾಳೆ. ಈ ಜಾತ್ರೆಗೆ ಗೋವಾ ಮಾತ್ರವಲ್ಲದೆ, ಮಹಾರಾಷ್ಟ್ರ ಮತ್ತು ಕರ್ನಾಟಕದಿಂದಲೂ ಭಕ್ತರು ಬರುತ್ತಾರೆ.
ಪ್ರಧಾನಿ ಮೋದಿ ಸಂತಾಪ;
ಗೋವಾದ ಶಿರ್ಗಾಂವ್ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಧಾನಮಂತ್ರಿ ಕಚೇರಿಯ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಟ್ವೀಟ್ ಮಾಡಲಾಗಿದ್ದು, “ಗೋವಾದ ಶಿರ್ಗಾಂವ್‌ನಲ್ಲಿ ಕಾಲ್ತುಳಿತದಿಂದ ಸಂಭವಿಸಿದ ಸಾವು ನೋವುಗಳಿಂದ ದುಃಖಿತನಾಗಿದ್ದೇನೆ. ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ. ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಹಾಯ ಮಾಡುತ್ತಿದೆ” ಎಂದು ಹೇಳಿದ್ದಾರೆ ಎಂದು ತಿಳಿಸಿದೆ.