ಮಂಗಳೂರು: ಬಜ್ಪೆ ಕಿನ್ನಿಪದವು ಎಂಬಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮಂಗಳೂರು ಪೊಲೀಸರು ಸುಮಾರು 8 ಮಂದಿಯನ್ನು ವಶಕ್ಕೆ ಪಡೆದಿದ್ದು, ಈ ಪೈಕಿ ಕಳಸ ಮೂಲದ ಇಬ್ಬರು ಹಿಂದೂ ಆರೋಪಿಗಳೂ ಸಹ ಇದ್ದಾರೆ ಎನ್ನಲಾಗುತ್ತಿದೆ.
ಮಂಗಳೂರಿನ ನಟೋರಿಯಸ್ ಅಬ್ದುಲ್ ಸಫ್ವಾನ್, ನಿಯಾಜ್, ಖಲಂದರ್ ಶಾಫಿ, ಮೊಹಮ್ಮದ್ ರಿಜ್ವಾನ್ ಹಾಗೂ ಕಳಸ ಮೂಲದ ರಂಜಿತ್ ಹಾಗೂ ನಾಗರಾಜ್ ಸೇರಿ ಒಟ್ಟು 8 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಕಳಸ ಮೂಲದ ಆರೋಪಿಗಳು ಮಂಗಳೂರಿನ ನಟೋರಿಯಸ್ ಸಫ್ವಾನ್ ಗ್ಯಾಂಗಿಗೆ ಸಾಥ್ ನೀಡಿದ್ದರು ಎನ್ನಲಾಗುತ್ತಿದೆ.
ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪಾಝಿಲ್ ಹತ್ಯೆಗೆ ರಿವೇಂಜ್ ಎಂದು ಶಂಕಿಸಲಾಗಿದ್ದರೂ ಪಾಝಿಲ್ ಹತ್ಯೆಗೂ ಸುಹಾಸ್ ಹತ್ಯೆಗೂ ಸಂಬಂಧವಿದೆಯಾ ಇಲ್ಲವಾ ಎನ್ನುವ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಬಹಿರಂಗಗೊಂಡಿಲ್ಲ. ಈ ಬಗ್ಗೆ ಪೊಲೀಸರು ಇನ್ನಷ್ಟೇ ಸಮಗ್ರ ಮಾಹಿತಿ ನೀಡಬೇಕಾಗಿದೆ.
ಪರಮೇಶ್ವರ್ ಆಗಮನ: ಸರಣಿ ಮಾತುಕತೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ| ಜಿ.ಪರಮೇಶ್ವರ್ ಇಂದು ಮಂಗಳೂರಿಗೆ ಆಗಮಿಸಿದ್ದು, ಸಭೆ ನಡೆಸುತ್ತಿದ್ದಾರೆ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜೊತೆ ಸಚಿವ ಪರಮೇಶ್ವರ್ ಅವರು ವಿಮಾನ ನಿಲ್ದಾಣದಿಂದ ನೇರವಾಗಿ ಸರ್ಕೀಟ್ ಹೌಸ್‌ಗೆ ಆಗಮಿಸಿ ಪರಸ್ಪರ ಮಾತುಕತೆ ನಡೆಸಿದರು. ಬಳಿಕ ಮುಸ್ಲಿಂ ಮುಖಂಡರ ಜೊತೆಯೂ ಮಾತುಕತೆ ನಡೆಸಿದರು. ಇವರೊಂದಿಗೆ ಎಡಿಜಿಪಿ ಹಿತೇಂದ್ರ ಆರ್., ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಪೊಲೀಸ್ ಕಮೀಷನರ್ ಅನುಪಮ ಅರ್ಗವಾಲ್, ಎಸ್.ಪಿ ಯತೀಶ್ ಎನ್. ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.