ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಪದವು ಎಂಬಲ್ಲಿ ಗುರುವಾರ ರಾತ್ರಿ ನಡೆದಿದ್ದ ರೌಡಿಶೀಟರ್ ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಜ್ಪೆಯ ಇಬ್ಬರು, ಜೋಕಟ್ಟೆಯ ಇಬ್ಬರು ಸೇರಿದಂತೆ ಒಟ್ಟು 8 ಮಂದಿಯನ್ನು ವಶಕ್ಕೆ ಪಡೆದಿದ್ದಾಗಿ ನಂಬಲರ್ಹ ಮೂಲಗಳು ಹೇಳಿವೆ. ಇವರಲ್ಲಿ ಮೂವರು ಹಿಂದುಗಳು ಕೂಡಾ ಭಾಗಿಯಾಗಿದ್ದು ಚಿಕ್ಕಮಗಳೂರು ಕಳಸ ಮೂಲದವರು ಎಂದು ಹೇಳಲಾಗುತ್ತಿದೆ.
ಸುಹಾಸ್ ಶೆಟ್ಟಿ ಬಜ್ಪೆ ಠಾಣಾ ವ್ಯಾಪ್ತಿಯ ಕಟೀಲು ದೇವರಗುಡ್ಡೆಯಲ್ಲಿ 2020ರಲ್ಲಿ ನಡೆದಿದ್ದ ಕೀರ್ತನ್(20) ಹತ್ಯೆ ಹಾಗೂ 2022ರಲ್ಲಿ ಸುರತ್ಕಲ್ ಠಾಣಾ ವ್ಯಾಪ್ತಿಯ ಸುರತ್ಕಲ್ ಜಂಕ್ಷನ್ ನಲ್ಲಿ ನಡೆದಿದ್ದ ಫಾಝಿಲ್(22) ಹತ್ಯೆಯಲ್ಲಿ ಪ್ರಧಾನ ಆರೋಪಿಯಾಗಿದ್ದು ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ.
ಗುರುವಾರ ರಾತ್ರಿ ಈತನನ್ನು ಮೀನಿನ ಲಾರಿಯಿಂದ ಡಿಕ್ಕಿ ಹೊಡೆಸಿ ಇನ್ನೋವಾ ಕಾರ್ ನಿಂದ ಹೊರಕ್ಕೆಳೆದು ತಲ್ವಾರ್ ನಿಂದ ಕಡಿದು ಕೊಲೆಗೈದ ತಂಡ ಪರಾರಿಯಾಗಿತ್ತು. ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಕುಖ್ಯಾತ ರೌಡಿಶೀಟರ್ ಸಫ್ವಾನ್ ಪಾತ್ರವನ್ನು ಶಂಕಿಸಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಈ ಕುರಿತ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.