ಚಿನ್ನದ ಆಸೆ ತೋರಿಸಿ ಕೋಟಿ ಲೂಟಿ: ಸುಹಾಸಿನಿ-ಪುನೀತ್ ದಂಪತಿಯ ‘ಹರಾಜು’ ಪುರಾಣ ಈಗ ಕಮಿಷನರ್ ಅಂಗಳಕ್ಕೆ!

ಉಡುಪಿ: ರಕ್ತ ಸಂಬಂಧಗಳೇ ರಕ್ತ ಹೀರುವ ಕಾಲವಿದು. ನಂಬಿಕೆ ಅನ್ನೋದು ಇಂದಿನ ದಿನಗಳಲ್ಲಿ ಮರೀಚಿಕೆಯಾಗಿ ಹೋಗಿದೆ. ಉಡುಪಿಯ ಈ ದಂಪತಿ ಮಾಡಿರೋ ಕೆಲಸ ಕೇಳಿದ್ರೆ, ಹಣದ ಹಸಿವು ಮನುಷ್ಯನನ್ನು ಎಷ್ಟರ ಮಟ್ಟಿಗೆ ಕುರುಡನನ್ನಾಗಿ ಮಾಡುತ್ತೆ ಅನ್ನೋದು ಅರ್ಥವಾಗುತ್ತೆ. ದೂರದ ಸಂಬಂಧಿ ಅಂತ ನಂಬಿದ್ದಕ್ಕೆ, ಮುಂಬೈ ಮೂಲದ ಉದ್ಯಮಿ ಮಮತಾ ಶೆಟ್ಟಿ ಅವರಿಗೆ ಈ ದಂಪತಿ ಕೊಟ್ಟಿದ್ದು ಬರೋಬ್ಬರಿ 4.78 ಕೋಟಿ ರೂಪಾಯಿಗಳ ಬಿಗ್ ಶಾಕ್!

ಸುಹಾಸಿನಿ ಶೆಟ್ಟಿ- ಪುನೀತ್‌ ಶೆಟ್ಟಿ

ಕಥೆ ಶುರುವಾಗಿದ್ದು ಹೇಗೆ?
ಸುಹಾಸಿನಿ ಶೆಟ್ಟಿ ಮತ್ತು ಆಕೆಯ ಪತಿ ಪುನೀತ್ ಶೆಟ್ಟಿ – ಇವರು ಈ ಕಥೆಯ ವಿಲನ್‍ಗಳು. ಹರಾಜಿನಲ್ಲಿ ಅಗ್ಗದ ದರಕ್ಕೆ ಬಂಗಾರ ಕೊಡಿಸ್ತೀವಿ, ಐಷಾರಾಮಿ ಫ್ಲ್ಯಾಟ್ ಕೊಡಿಸ್ತೀವಿ, ಸ್ಕ್ರಾಪ್ ವ್ಯವಹಾರದಲ್ಲಿ ಲಾಭ ಮಾಡಿಕೊಡ್ತೀವಿ ಅಂತ ಈ ದಂಪತಿ ಮಮತಾ ಶೆಟ್ಟಿ ಅವರ ಕಿವಿ ಮೇಲೆ ಹೂವು ಇಟ್ಟಿದ್ದಾರೆ. 2024ರ ಜನವರಿಯಿಂದ ಜೂನ್ ತಿಂಗಳವರೆಗೆ ಹಂತ ಹಂತವಾಗಿ, ಕಂತು ಕಂತುಗಳಲ್ಲಿ ಕೋಟಿ ಕೋಟಿ ಹಣವನ್ನು ಗುಳುಂ ಮಾಡಿದ್ದಾರೆ. ಸಂಬಂಧಿ ಅಲ್ವಾ ಅಂತ ನಂಬಿದ್ದೇ ಮಮತಾ ಶೆಟ್ಟಿ ಅವರು ಮಾಡಿದ ಅತೀ ದೊಡ್ಡ ತಪ್ಪು!

ನ್ಯಾಯಾಲಯದ ಸ್ಟೇ ಮತ್ತು ಸ್ಥಳಾಂತರದ ಹೈಡ್ರಾಮಾ:
ವಂಚನೆ ಗೊತ್ತಾಗಿ 2024ರಲ್ಲೇ ಸೈಬರ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಆದರೆ ಈ ಸುಹಾಸಿನಿ ಸಾಮಾನ್ಯದವಳಲ್ಲ, ಕೋರ್ಟ್‌ನಿಂದ ಸ್ಟೇ ಆರ್ಡರ್ ತಂದು ಆಟ ಆಡಿದ್ದಳು. ಮಧ್ಯಸ್ಥಿಕೆಗಾರರ ಮೂಲಕ ಸಂಧಾನ ನಡೆದರೂ ನಯಾಪೈಸೆ ಹಣ ವಾಪಸ್ ಕೊಡಲಿಲ್ಲ. ಈಗ ಈ ಜೋಡಿ ಮಣಿಪಾಲದಿಂದ ಮಂಗಳೂರಿಗೆ ಜಾಗ ಖಾಲಿ ಮಾಡಿದೆ. ಈ ಕಿರಾತಕ ದಂಪತಿಯನ್ನು ಸುಮ್ಮನೆ ಬಿಡಬಾರದು ಅಂತ ಮಮತಾ ಶೆಟ್ಟಿ ಅವರು ಮಂಗಳೂರು ಪೊಲೀಸ್ ಕಮಿಷನರ್ ಕದ ತಟ್ಟಿದ್ದಾರೆ.

ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಮರು ತನಿಖೆಯ ಭರವಸೆ ನೀಡಿದ್ದಾರೆ. ಪರಾರಿಯಾದ ದಂಪತಿ ಈಗ ಕಮಿಷನರ್ ಬಲೆಯಲ್ಲಿ ಬೀಳುತ್ತಾರಾ? ಅಥವಾ ಕಳ್ಳಾಟ ಮುಂದುವರಿಯುತ್ತಾ? ಕಾದು ನೋಡಬೇಕು.

error: Content is protected !!