ಮಂಗಳೂರು: ಕರಾವಳಿ ಅಂದ್ರೆ ಸಾಕು ಅಲ್ಲಿ ಪ್ರೀತಿಗಿಂತ ಹೆಚ್ಚಾಗಿ ವಿವಾದಗಳೇ ಸದ್ದು ಮಾಡುತ್ತವೆ. ಅದರಲ್ಲೂ ಅನ್ಯಕೋಮಿನ ಪ್ರೇಮ ಪುರಾಣವಂತೂ ಅಕ್ಷರಶಃ ಬೆಂಕಿಗೆ ತುಪ್ಪ ಸುರಿದಂತೆ. ಮಂಗಳೂರಿನ ಸುರತ್ಕಲ್ ವ್ಯಾಪ್ತಿಯಲ್ಲಿ ಈಗ ಅಂತಹದ್ದೇ ಒಂದು ಪ್ರಕರಣ ಕಿಚ್ಚು ಹಚ್ಚಿದೆ. ಕಾಸರಗೋಡಿನ ಮೀಪುಗುರಿಯ ವೈಶಾಲಿ (23) ಎಂಬ ವಿದ್ಯಾರ್ಥಿನಿ, ಸುರತ್ಕಲ್ ಮುಕ್ಕದ ಕಾಲೇಜಿನಲ್ಲಿ ಕ್ರಿಮಿನಾಲಜಿ ಓದುತ್ತಿದ್ದಳು. ಕ್ರಿಮಿನಾಲಜಿ ಓದುತ್ತಿದ್ದ ಹುಡುಗಿಯೇ ಈಗ ಒಂದು ನಿಗೂಢ ಪ್ರಕರಣದ ಕೇಂದ್ರಬಿಂದುವಾಗಿದ್ದಾಳೆ!

ವಯನಾಡ್ ರಿಜಿಸ್ಟರ್ ಆಫೀಸ್ ಹಾಗೂ ಐದು ನಿಮಿಷದ ಕಿರಿಕ್:
ವೈಶಾಲಿ ಮತ್ತು ಮೊಹಮ್ಮದ್ ಮಿದ್ಲಾಜ್ ಎಂಬ ಯುವಕ ಜನವರಿ 31ರಂದೇ ಕೇರಳದ ವಯನಾಡ್‌ನಲ್ಲಿ ಗುಟ್ಟಾಗಿ ನೋಂದಣಿ ಮದುವೆಯಾಗಿದ್ದಾರಂತೆ. ಈ ವಿಷಯ ತಿಳಿಯುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಫೆಬ್ರವರಿ 9ರಂದು ಪಿಜಿಯಿಂದ ಲಗೇಜ್ ಸಮೇತ ವೈಶಾಲಿ ಮಾಯವಾಗಿದ್ದಾಳೆ. ಮಗಳು ಮುಸ್ಲಿಂ ಯುವಕನ ಜೊತೆ ಹೋದ ಸುದ್ದಿ ಕೇಳಿ ಆ ತಂದೆ ವಿದೇಶದಿಂದ ವಿಮಾನ ಹತ್ತಿ ಓಡಿ ಬಂದಿದ್ದಾರೆ. ಆದರೆ ವಯನಾಡ್ ಪೊಲೀಸರು ಮಗಳ ಜೊತೆ ಐದು ನಿಮಿಷ ಮಾತನಾಡಲೂ ಬಿಡಲಿಲ್ಲ ಎಂಬುದು ಆ ತಂದೆಯ ಆಕ್ರೋಶದ ನುಡಿ.

ಪೋಷಕರ ಆರೋಪ: ಇದು ಬ್ರೈನ್‌ವಾಶ್ ಅಥವಾ ಬ್ಲ್ಯಾಕ್‌ಮೇಲ್
ವೈಶಾಲಿಯ ತಾಯಿ ಲತಾ ಮತ್ತು ತಂದೆ ವಿಶ್ವನಾಥ್ ಮಾಧ್ಯಮಗಳ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. “ಪೊಲೀಸರ ಎದುರಲ್ಲೇ ಮಗಳು ನಮ್ಮ ಜೊತೆ ಬರಲು ಸಿದ್ಧಳಿದ್ದಳು, ಆದರೆ ಪೊಲೀಸರೇ ಅದಕ್ಕೆ ಅಡ್ಡಗಾಲು ಹಾಕಿದರು” ಎನ್ನುವುದು ಅವರ ಗಂಭೀರ ಆರೋಪ. ಅಷ್ಟೇ ಅಲ್ಲ, ತನ್ನ ಮಗಳನ್ನು ಬ್ರೈನ್‌ವಾಶ್ ಮಾಡಲಾಗಿದೆ ಅಥವಾ ಬ್ಲ್ಯಾಕ್‌ಮೇಲ್ ಮೂಲಕ ಕರೆದುಕೊಂಡು ಹೋಗಲಾಗಿದೆ ಎಂಬ ಅನುಮಾನ ಅವರದ್ದು. ಈ ಕಥೆಯಲ್ಲಿ ಯಾವುದೋ ದೊಡ್ಡ ಸಂಚು ಅಡಗಿದೆ ಅನ್ನೋದು ಅವರ ವಾದ.

ಈಗ ಚೆಂಡು ಸುರತ್ಕಲ್ ಪೊಲೀಸರ ಅಂಗಳದಲ್ಲಿದೆ. ಯುವತಿಯ ಸ್ವಯಂ ಇಚ್ಛೆ ಇದೆಯೋ ಅಥವಾ ಪೋಷಕರು ಹೇಳುವಂತೆ ಬೆದರಿಕೆ ಇದೆಯೋ ಎನ್ನುವುದನ್ನು ಕಾನೂನು ನಿರ್ಧರಿಸಬೇಕಿದೆ. ಆದರೆ, ಪ್ರೀತಿಯ ಹೆಸರಿನಲ್ಲಿ ನಡೆಯುವ ಇಂತಹ ಹೈಡ್ರಾಮಾಗಳು ಕರಾವಳಿಯ ನೆಮ್ಮದಿಯನ್ನು ಕೆಡಿಸುತ್ತಿರುವುದು ಮಾತ್ರ ಕಟು ಸತ್ಯ.