ನವದೆಹಲಿ: ವಿಶ್ವಸಂಸ್ಥೆಯಲ್ಲಿ ಭಾರತದ ಉಪ ಖಾಯಂ ಪ್ರತಿನಿಧಿ ರಾಯಭಾರಿ ಯೋಜನ ಪಟೇಲ್ ಪಹಲ್ಗಾಂ ನರಮೇಧವನ್ನು ಪ್ರಸ್ತಾಪಿಸಿದ್ದು, ಇದರಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ಅಲ್ಲದೆ ಪಾಕಿಸ್ತಾನವನ್ನು ʻರಾಕ್ಷಸ ರಾಷ್ಟ್ರʼ ಎಂದು ಕರೆದಿದ್ದಾರೆ.
2008 ರ ಭೀಕರ 26/11 ಮುಂಬೈ ದಾಳಿಯ ಆನಂತರ 26 ಜನರು ಸಾವನ್ನಪ್ಪಿದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಭಾರತ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿತು. ಭಯೋತ್ಪಾದಕರಿಗೆ ತರಬೇತಿ ಮತ್ತು ಹಣಕಾಸು ಒದಗಿಸಿದ್ದಕ್ಕಾಗಿ ಪಾಕಿಸ್ತಾನ ರಕ್ಷಣಾ ಸಚಿವರ “ಬಹಿರಂಗ ತಪ್ಪೊಪ್ಪಿಗೆ”ಯನ್ನು ಭಾರತ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿ ಟೀಕಿಸದೆ. ಪಾಕ್ ರಕ್ಷಣಾ ಸಚಿವರ ತಪ್ಪೊಪ್ಪಿಗೆಯು ಆಶ್ಚರ್ಯಕರವಲ್ಲ, ಯಾಕೆಂದರೆ ಪಾಕಿಸ್ತಾನ ಜಾಗತಿಕ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವ “ರಾಕ್ಷಸ ರಾಷ್ಟ್ರ” ಎನ್ನುವುದನ್ನು ಬಹಿರಂಗಪಡಿಸಿತು ಎಂದು ಹೇಳಿದರು.
ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್!
ಏಪ್ರಿಲ್ 28-29 ರ ರಾತ್ರಿ, ಪಾಕಿಸ್ತಾನಿ ಪಡೆಗಳು ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಸತತ ಐದನೇ ರಾತ್ರಿ ಕದನ ವಿರಾಮವನ್ನು ಉಲ್ಲಂಘಿಸಿವೆ. ಆದಾಗ್ಯೂ, ಭಾರತೀಯ ಸೇನೆಯು ಜವಾಬ್ದಾರಿಯುತವಾಗಿ ಪ್ರತಿಕ್ರಿಯಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಪ್ವಾರಾ ಮತ್ತು ಬಾರಾಮುಲ್ಲಾ ಜಿಲ್ಲೆಗಳ ಎದುರಿನ ಪ್ರದೇಶಗಳಲ್ಲಿ ಹಾಗೂ ಅಖ್ನೂರ್ ವಲಯದಲ್ಲಿ ಗುಂಡಿನ ದಾಳಿ ನಡೆದಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಭದ್ರತಾ ಸನ್ನದ್ಧತೆಯ ಬಗ್ಗೆ ಸೋಮವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಿದ್ದರು.