ಕಾಲೇಜು ಕ್ಯಾಂಪಸ್‌ನಲ್ಲಿ ʻಪೆನ್ ಚಾಕು’ ಜಗಳ: ಸಹಪಾಠಿ ಬೆನ್ನಿಗೆ ಇರಿದ ವಿದ್ಯಾರ್ಥಿ ಈಗ ಪೊಲೀಸ್ ಅತಿಥಿ!

ವಿಟ್ಲ: ಇತ್ತೀಚಿನ ದಿನಗಳಲ್ಲಿ ನಮ್ಮ ವಿದ್ಯಾಸಂಸ್ಥೆಗಳು ಜ್ಞಾನದ ಕೇಂದ್ರಗಳಾಗುವ ಬದಲು ಕ್ರೌರ್ಯದ ಅಖಾಡಗಳಾಗುತ್ತಿವೆಯೇ ಎಂಬ ಅನುಮಾನ ಕಾಡುತ್ತಿದೆ. ಇದಕ್ಕೆ ಪೂರಕ ಎಂಬಂತೆ ವಿಟ್ಲದಲ್ಲಿ ಇಂದು ನಡೆದ ಆ ಘಟನೆಯಿಂದಾಗಿ ನಮ್ಮ ಯುವಜನತೆ ಎಷ್ಟು ಅರಾಜಕತೆಯತ್ತ ಸಾಗುತ್ತಿದೆ, ಕೈಯಲ್ಲಿ ಪುಸ್ತಕ ಹಿಡಿಯಬೇಕಿದ್ದ ಹುಡುಗರು ಈಗ ಜೇಬಿನಲ್ಲಿ ಚಾಕು ಇಟ್ಟುಕೊಂಡು ತಿರುಗಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ

ಏನಿದು ‘ಪೆನ್ ಚಾಕು’ ಪುರಾಣ?
ಇಂದು ಅಂದರೆ ಫೆಬ್ರವರಿ 11ರ ಬುಧವಾರ. ವಿಟ್ಲದ ಆ ಖಾಸಗಿ ಕಾಲೇಜಿನಲ್ಲಿ ಎಲ್ಲವೂ ಮಾಮೂಲಿಯಾಗಿತ್ತು. 19 ವರ್ಷದ ಹೇಮಂತ್ ಮತ್ತು ಆತನ ಅಪ್ರಾಪ್ತ ಗೆಳೆಯರ ನಡುವೆ ಯಾವುದೋ ಕ್ಷುಲ್ಲಕ ವಿಷಯಕ್ಕೆ ಮಾತಿಗೆ ಮಾತು ಬೆಳೆದಿದೆ. ಸಣ್ಣ ಕಿಡಿ ಹೊತ್ತಿಕೊಂಡರೆ ಸಾಕು, ಇಂದಿನ ಹುಡುಗರ ರಕ್ತ ಕುದಿಯಲು ಶುರುವಾಗುತ್ತೆ. ಕ್ಷಣಾರ್ಧದಲ್ಲಿ ತನ್ನ ಜೇಬಿನಲ್ಲಿದ್ದ ಪೆನ್ ಚಾಕುವನ್ನು ಹೊರತೆಗೆದ ಹೇಮಂತ್, ತನ್ನದೇ ಸಹಪಾಠಿ ಪುತ್ತೂರು ಬನ್ನೂರು ನಿವಾಸಿ ಮಹಮ್ಮದ್ ರಿಯಾನ್ (18)  ಎಂಬಾತನಿಗೆ ಇರಿದಿದ್ದಾನೆ.

ಪಾರಾದ ಜೀವಗಳು:
ಚಾಕು ಇರಿತಕ್ಕೆ ಒಳಗಾದ ಹುಡುಗ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಜಗಳ ಬಿಡಿಸಲು ಬಂದ ಮತ್ತೊಬ್ಬ ಅಪ್ರಾಪ್ತ ವಿದ್ಯಾರ್ಥಿ ಮಂಜೇಶ್ವರ ದೈಗೋಳಿ ನಿವಾಸಿ ಯಜ್ಞೇಶ್ ಗೂ ಗಾಯಗಳಾಗಿವೆ. ವಿಟ್ಲ ಪೊಲೀಸರು ಈಗ ಈ ಹೇಮಂತ್‌ನನ್ನು ವಶಕ್ಕೆ ಪಡೆದಿದ್ದು, ಅ.ಕ್ರ-32/2026 ಕಲಂ 115(1), 352, 109, 118(1) ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

error: Content is protected !!