ಮಂಗಳೂರು: ನಗರದ ಕುಡುಪು ಸಮೀಪದ ಭಟ್ರಕಲ್ಲುರ್ಟಿ ದೈವಸ್ಥಾನದ ಸಮೀಪ ನಡೆದ ಉತ್ತರ ಭಾರತ ಮೂಲದ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 15 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಕುಡುಪು ನಿವಾಸಿಗಳಾದ ಸಚಿನ್ (ಟಿ), ದೇವದಾಸ ಅಂಚನ್(50), ಕುಡುಪು ಕಟ್ಟೆ ತಿರುವೈಲು ನಿವಾಸಿ ದೀಕ್ಷಿತ್. ನೀರುಮಾರ್ಗ ಪದಮಲೆಯ ಸಾಯಿದೀಪ್(29), ನಟೇಶ್(33), ಕುಡುಪು ಮಂಗಳನಗರದ ಮಂಜುನಾಥ(32), ಕುಡುಪು ನಿವಾಸಿಗಳಾದ ಸಂದೀಪ್(23), ವಿವಿಯನ್ ಆಲ್ವರಿಶ್(41), ಶ್ರೀದತ್ತ(32), ರಾಹುಲ್(23), ಪ್ರದೀಪ್ ಕುಮಾರ್(35), ಮನೀಷ್(21). ದೀಕ್ಷಿತ್(27) ಹಾಗೂ ಕಿಶೋರ್ ಎಂದು ಗುರುತಿಸಲಾಗಿದೆ.
ಎ.27ರ ಸಂಜೆ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿದ್ದು ಸಾವಿಗೆ ನಿಖರ ಕಾರಣ ಗೊತ್ತಾಗಿರಲಿಲ್ಲ. ಆದರೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಇದೊಂದು ಗುಂಪು ಹತ್ಯೆಯಾಗಿದ್ದು, ಈತ ಬಾಂಗ್ಲಾ ಮೂಲದ ಅನ್ಯ ಕೋಮಿನ ಗುಂಪಿಗೆ ಸೇರಿದವನೆಬ ಕಾರಣಕ್ಕೆ ಕ್ರಿಕೇಟ್ ಆಡುತ್ತಿದ್ದ ಯುವಕರು ಈ ಕೃತ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸ್ಪೀಕರ್ ಯು.ಟಿ. ಖಾದರ್ ಸಮಗ್ರ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದರು.
ಅಲ್ಲದೆ ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂದು ಬಹಿರಂಗಗೊಂಡ ಹಿನ್ನೆಲೆ ತನಿಖೆಯನ್ನು ಚುರುಕುಗೊಳಿಸಿ, ಒಟ್ಟು ಹದಿನೈದು ಮಂದಿ ಆರೋಪಿಗನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಕಮಿಷನರ್ ಹೇಳಿದ್ದೇನು?
ಏಪ್ರಿಲ್ 27 ರಂದು ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನದ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಅದೊಂದು ಕೊಲೆ ಎಂಬುದು ಸಾಬೀತಾಗಿದ್ದು, ಒಟ್ಟು 15 ಮಂದಿಯನ್ನು ಬಂಧಿಸಿದ್ದಾಗಿ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದರು.
ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು ಪ್ರಕರಣದಲ್ಲಿ ಸುಮಾರು 25 ಕ್ಕೂ ಹೆಚ್ಚು ಮಂದಿ ಆರೋಪಿಗಳಿದ್ದು ಉಳಿದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅಪರಚಿತ ವ್ಯಕ್ತಿಯನ್ನು ಭೀಕರವಾಗಿ ಥಳಿಸಿ ಕಾಲಿನಿಂದ ತುಳಿದು ಸಾಯಿಸಿರುವುದಾಗಿ ಮಾಹಿತಿ ಲಭ್ಯವಾಗಿದ್ದು, ಅಲ್ಲಿದ್ದ ಕೆಲವರು ತಡೆಯಲು ಯತ್ನಿಸಿದ್ರೂ ಬಿಡದೆ ಯುವಕನನ್ನು ಹೊಡೆದು ಸಾಯಿಸಲಾಗಿದೆ ಎಂದು ಅಗರವಾಲ್ ತಿಳಿಸಿದ್ದಾರೆ.
ಮೃತನ ಗುರುತು ಪತ್ತೆ ಹಚ್ಚುವ ಸಲುವಾಗಿ, ಮೃತನ ಫೋಟೋಗಳನ್ನು ವ್ಯಾಪಕವಾಗಿ ಹಂಚಲಾಗಿತ್ತು. ಘಟನೆಯ ಸಮಯದಲ್ಲಿ ಸ್ಥಳದಲ್ಲಿದ್ದ ಸಾಕ್ಷಿದಾರರು ಮತ್ತು ಅನುಮಾನಿತ ವ್ಯಕ್ತಿಗಳನ್ನು ವಿಚಾರಣೆ ಮಾಡುವ ಮತ್ತು ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳು ಹಾಗೂ ಮೊಬೈಲ್/ಟವರ್ ಡಂಪ್ ಡೇಟಾ ಸಂಗ್ರಹಿಸಿ ವಿಶ್ಲೇಷಿಸಲು ಹಲವು ತಂಡಗಳನ್ನು ರಚಿಸಲಾಯಿತು. ತನಿಖೆ ವೇಳೆ ಲಭ್ಯವಾದ ಮಾಹಿತಿ ಹಾಗೂ ಸ್ಥಳೀಯ ವ್ಯಕ್ತಿಗಳ ಭಾಗವಹಿಸಿರುವ ಬಗ್ಗೆ ಅನುಮಾನಗೊಂಡು ಅಪರಿಚಿತ ಮೃತದೇಹದ ಶವ ಪರೀಕ್ಷೆ ನಡೆಸಲಾಯಿತು. ಮರಣೋತ್ತರ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ನೀಡಿದ ಪ್ರಾಥಮಿಕ ವರದಿ ಪ್ರಕಾರ, ಮೃತನ ಬೆನ್ನು ಭಾಗದಲ್ಲಿ ಬಹಳಷ್ಟು ಬಲವಾದ ಹೊಡೆತದ ಗಾಯಗಳ ಕಾರಣದಿಂದ ಉಂಟಾದ ರಕ್ತಸ್ರಾವ, ಶಾಕ್ ಮತ್ತು ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದಿರುವುದರಿಂದ ಮರಣ ಸಂಭವಿಸಿದೆ ಎಂದು ಮಾಹಿತಿ ನೀಡಿದರು.