ತೆಲಂಗಾನ: ದಕ್ಷಿಣ ಭಾರತದ ಸಿನಿರಂಗದ ಅಭಿನೇತ್ರಿ ಶ್ರೀಲೀಲಾ ಇದೀಗ ಬಹುಬೇಡಿಕೆಯ ನಟಿ. ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ಶ್ರೀಲೀಲಾ ಅವರು ಸಾಮಾಜಿಕ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಇದೀಗ ‘ಮನೆಗೆ ಮತ್ತೊಂದು ಸದಸ್ಯೆಯ ಆಗಮನ’ ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕುವ ಮೂಲಕ ತಾನು ಮಗುವಿನ ತಾಯಿಯಾಗಿರುವುದನ್ನು ಬಹಿರಂಗಪಡಿಸಿದ್ದಾರೆ.
ಈ ಮೊದಲು ಇಬ್ಬರು ಮಕ್ಕಳನ್ನು ಶ್ರೀಲೀಲಾ ದತ್ತು ಪಡೆದಿದ್ದರು. ಈಗ ನಟಿ ಮತ್ತೊಂದು ಪುಟ್ಟ ಕಂದಮ್ಮನನ್ನು ದತ್ತು ಪಡೆದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಮೂರನೇ ಮಗಿವಗೆ ತಾಯಿಯ ಸ್ಥಾನ ತುಂಬಿದ್ದಾರೆ.
‘ಕಿಸ್’, ‘ಭರಾಟೆ’ ಮುಂತಾದ ಕನ್ನಡ ಸಿನಿಮಾಗಳ ಮೂಲಕ ಶ್ರೀಲೀಲಾ ಎಲ್ಲರ ಗಮನ ಸೆಳೆದಿದ್ದಾರೆ. ತೆಲುಗಿನ ‘ಪೆಳ್ಳಿ ಸಂದಡಿ’ ಚಿತ್ರದಲ್ಲಿ ನಟಿಸಿದ ಬಳಿಕ ಅವರ ಖ್ಯಾತಿ ಟಾಲಿವುಡ್ನಲ್ಲಿ ಹೆಚ್ಚಾಗಿದೆ. ಈ ಚಿತ್ರದಿಂದ ಅವರಿಗೆ ತೆಲುಗಿನಲ್ಲಿ ಬೇಡಿಕೆ ಸೃಷ್ಟಿ ಆಗಿದೆ. ‘ಪುಷ್ಪ 2’ ಚಿತ್ರದ ವಿಶೇಷ ಹಾಡಿಗೂ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ. ನಟನೆಯ ಜೊತೆಗೆ ಅವರಿಗೆ ಸಾಮಾಜಿಕ ಕೆಲಸಗಳ ಬಗ್ಗೆ ಆಸಕ್ತಿ ಇದೆ.
ಶ್ರೀಲೀಲಾ ಅವರು 21ನೇ ವಯಸ್ಸಿಗೆ ಎರಡು ಮಕ್ಕಳ ತಾಯಿಯಾದರು. ಈ ಮೊದಲು ಮಾತೃಶ್ರೀ ಮನೋವಿಕಾಸ ಕೇಂದ್ರಕ್ಕೆ ಭೇಟಿ ನೀಡಿದ್ದ ಶ್ರೀಲೀಲಾ ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಪಡೆದುಕೊಂಡಿದ್ದರು. ಈಗ ಅವರು ಮತ್ತೊಂದು ಮಗುವನ್ನು ದತ್ತು ಪಡೆದು ಮೂವರು ಮಕ್ಕಳ ತಾಯಿಯಾಗಿದ್ದಾರೆ.
‘ಮನೆಗೆ ಮತ್ತೊಂದು ಸದಸ್ಯೆಯ ಆಗಮನ’ ಎಂದು ಶ್ರೀಲೀಲಾ ಬರೆದು ಮಗುವಿನ ಫೋಟೋಗಳನ್ನು ಹಾಕಿಕೊಂಡಿದ್ದಾರೆ. ನಟಿಯ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಶ್ರೀಲೀಲಾಗೆ ಈಗಿನ್ನೂ 23 ವರ್ಷ. ಇಷ್ಟು ಸಣ್ಣ ವಯಸ್ಸಿನಲ್ಲಿ ಅವರು ಸಾಮಾಜಿಕ ಕೆಲಸದ ಬಗ್ಗೆ ಇಷ್ಟೊಂದು ಗಮನ ಹರಿಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ ಎಂಬುದು ಅನೇಕರ ಅಭಿಪ್ರಾಯ.
ಶ್ರೀಲೀಲಾ ಅವರು ಸದ್ಯ ಬಾಲಿವುಡ್ನಲ್ಲಿ ‘ಆಶಿಕಿ 3’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಕಾರ್ತಿಕ್ ಆರ್ಯನ್ ಹೀರೋ. ಈ ಸಿನಿಮಾ ಬಗ್ಗೆ ಪ್ರೇಕ್ಷಕರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗುವ ಸೂಚನೆ ಸಿಕ್ಕಿದೆ. ಕಾರ್ತಿಕ್ ಆರ್ಯನ್ ಜೊತೆ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಯೂ ಇದೆ.
ಅವರು ಸಿದ್ದಾರ್ಥ್ ಮಲ್ಹೋತ್ರ ಚಿತ್ರಕ್ಕೂ ಈಕೆ ನಾಯಕಿ ಎಂದು ತಿಳಿದುಬಂದಿದೆ.