ಮಂಗಳೂರು: ಮೇ 9ರಂದು ಕರಾವಳಿಯಾದ್ಯಂತ ನಮ್ಮ ಕನಸು ಬ್ಯಾನರಿನಲ್ಲಿ ಕೆ. ಸುರೇಶ್ ಅವರು ನಿರ್ಮಿಸಿದ, ರಮೇಶ್ ಶೆಟ್ಟಿಗಾರ್ ಬರೆದು, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶಿಸಿದ ‘ಪಿದಾಯಿ’ ತುಳು ಚಲನಚಿತ್ರ ತೆರೆಕಾಣಲಿದೆ ಎಂದು ಸಂತೋಷ್ ಮಾಡ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಪಿದಾಯಿ’ ಚಿತ್ರವು ಕೊಲ್ಕತ್ತಾ ಸಿಮ್ಲಾ, ಜಾರ್ಖಂಡ್ ಹಾಗೂ ಕ್ಯಾಲಿಫೋರ್ನಿಯಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ಆಯ್ಕೆಯಾಗುವುದರ ಜೊತೆಗೆ, 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಾರಿಗೆ ತುಳು ಚಿತ್ರವೊಂದು ಭಾರತೀಯ ಚಲನಚಿತ್ರ ಹಾಗೂ ಕನ್ನಡ ಚಲನಚಿತ್ರ ವಿಭಾಗಗಳಲ್ಲಿ ಸ್ಪರ್ಧೆಯಲ್ಲಿದ್ದು, ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ ಎಂದರು.
ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಮಹಾಮಾಯಿ ಪಾತ್ರಿಯಾಗಿ ಕನ್ನಡದ ಖ್ಯಾತ ನಟ ಶರತ್ ಲೋಹಿತಾಶ್ವ ಅಭಿನಯಿಸಿದ್ದಾರೆ. ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೋಳಾರ್, ರೂಪಶ್ರೀ ವರ್ಕಾಡಿ, ಇಳಾ ವಿಟ್ಲ, ದೇವಿ ನಾಯರ್, ಪ್ರೀತೇಶ್, ಅನಿಲ್ ರಾಜ್ ಉಪ್ಪಳ, ರವಿ ವರ್ಕಾಡಿ, ಹಾಗೂ ಬಾಲ ಪ್ರತಿಭೆಗಳಾದ ಮೋನಿಶ್, ತ್ರಿಷ, ಧ್ರುವ, ನಿಹಾ, ಖುಷಿ ಡಿಬಿಸಿ ಶೇಖರ್, ಅನಿತಾ ಚಂದ್ರಶೇಖರ್ ಮುಂತಾದವರು ಅಭಿನಯಿಸಿದ್ದಾರೆ.
ಛಾಯಾಗ್ರಾಹಣವನ್ನು ಉಣ್ಣೆ ಮಾಡವೂರ್, ಸುರೇಶ್ ಅರಸ್ ಸಂಕಲನ, ರಮೇಶ್ ಶೆಟ್ಟಿಗಾರ್ ಹಾಗೂ ಡಿ.ಬಿ.ಸಿ ಶೇಖರ್ ಸಂಭಾಷಣೆ ಬರೆದಿದ್ದಾರೆ. ದ.ಕ ಜಿಲ್ಲೆಯ ಮುಡಿಪು ಹಾಗೂ ಮಂಜೇಶ್ವರದ ಗಡಿಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಅಜಯ್ ನಂಬೂದಿರಿ ಸಂಗೀತ ನೀಡಿದ್ದು, ಡಾ| ವಿದ್ಯಾಭೂಷಣ್ ಪ್ರಥಮವಾಗಿ ಚಲನಚಿತ್ರದಲ್ಲಿ ಹಾಡಿದ್ದಾರೆ. ಹಿನ್ನಲೆ ಗಾಯಕರಾದ ಮೇಧ ವಿದ್ಯಾಭೂಷಣ್, ವಿಜೇಶ್ ಗೋಪಾಲ್ ಮುಂತಾದವರು ಕಂಠದಾನ ಮಾಡಿದ್ದಾರೆ. ದೀಪಾಂಕುರನ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ತುಳುನಾಡಿನ ವಿಶೇಷತೆಯಾದ ಕುಣಿತ ಭಜನೆಯನ್ನು ಮೊದಲ ಬಾರಿಗೆ ಪ್ರಯೋಗಿಸಲಾಗಿದೆ ಎಂದರು.
ನಟ ಶರತ್ ಲೋಹಿತಾಶ್ವ ಮಾತನಾಡಿ, ಭೋಜಣ್ಣ ಎಂಬ ಮಹಮ್ಮಾಯಿ ಪಾತ್ರಿಯವರ ಮನೆಗೆ ವಿದ್ಯಾವಂತೆಯೊಬ್ಬಳು ಸೊಸೆಯಾಗಿ ಬಂದಾಗ, ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರನ್ನು ನಡೆಸಿಕೊಳ್ಳುವ ರೀತಿಯನ್ನು ಕಂಡು ಅವಳು ನಡೆಸುವ ಸಾತ್ವಿಕ ಸಂಘರ್ಷ ಹಾಗೂ ಮಹಿಳೆಯರ ಘನತೆಯನ್ನು ಎತ್ತಿ ಹಿಡಿಯಲು ಭೋಜಣ್ಣ ತೆಗೆದುಕೊಳ್ಳುವ ದೃಢನಿರ್ಧಾರವು ಕಥೆಯ ಜೀವಾಳ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪುಷ್ಪರಾಜ್ ಬೋಳಾರ್, ಡಿ.ಬಿ.ಸಿ ಶೇಖರ್, ರವಿ ವರ್ಕಾಡಿ, ಪ್ರೀತೇಶ್, ರೂಪಾ ವರ್ಕಾಡಿ ಉಪಸ್ಥಿತರಿದ್ದರು