ಮಂಗಳೂರು: ನಿಡೋಡ್ಡಿಯ ಮಹಿಳೆಯ ಹತ್ಯೆ ಪ್ರಕರಣದ ಆರೋಪಿಯನ್ನು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ. ಶೇಖರ ಶೆಟ್ಟಿ ಖುಲಾಸೆಗೊಂಡ ವ್ಯಕ್ತಿ.
2016ರ ಜ.12ರಂದು ನಿಡ್ಡೋಡಿಯ ಯಮುಲ ಮನೆ ನಿವಾಸಿ ರೇವತಿ ನಿಡೋಡಿಗೆ ಹೋಗಿ ಬರುವುದಾಗಿ ಮನೆಯಿಂದ ಹೋಗಿದ್ದು, ಮತ್ತೆ ಮರಳಿ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಕೆಯಯ ಅಣ್ಣ ತಿಮ್ಮಪ್ಪ ಮಡಿವಾಳ ದೂರಿನಂತೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ದೂರಿನಲ್ಲಿ ಅವರು ಸ್ಥಳೀಯ ವ್ಯಕ್ತಿ ಶುಂಠಿಲ ಪದವಿನ ನಿವಾಸಿಯಾದ ಶೇಖರ ಶೆಟ್ಟಿ ಅವರ ಮೇಲೆ ಸಂಶಯವಿರುವುದಾಗಿ ತಿಳಿಸಿದ್ದರು.
ಪೊಲೀಸರು ಶೇಖರನನ್ನು ವಿಚಾರಿಸಿದಾಗಲೂ ಆತ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಮಧ್ಯೆ ಶೇಖರ ಶೆಟ್ಟಿ ಮನೆ ಬಿಟ್ಟು ಹೋಗಿದ್ದು, ಈ ಕುರಿತು ಅವರ ಪತ್ನಿ ದಯಾವತಿ ಶೇಖರ ಶೆಟ್ಟಿ ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಿಸಿದ್ದರು. ಆ ಬಳಿಕ ಶೇಖರ ಶೆಟ್ಟಿ 2016 ಜ. 18ರಂದು ಠಾಣೆಗೆ ಹಾಜರಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದನು.
ರೇವತಿ ಬೀಡಿ ಬ್ರಾಂಚಿಗೆಂದು ಶುಂಠಿಲ ಪದವಿಗೆ ಬರುತ್ತಿರುವಾಗ ಪರಿಚಯವಾಗಿದ್ದು ಅನ್ನೋನ್ಯವಾಗಿದ್ದರು. ಶೇಖರ್‌ಗೆ ಹಣದ ಸಮಸ್ಯೆಯಾದಾಗ ರೇವತಿಯ ಬಂಗಾರವನ್ನು ಪಡೆದು ಅಡವಿಟ್ಟು ಸಾಲ ಪಡೆಯುತ್ತಿದ್ದ. ಹಾಗೆಯೇ 2015ರ ನವೆಂಬರ್‌ನಲ್ಲಿ ರೇವತಿ ಸರವನ್ನು ನೀಡಿದ್ದು ಸಹಕಾರಿ ಸಂಘದಲ್ಲಿ ಅಡವಿಟ್ಟು ಸಾಲ ಪಡೆದಿದ್ದನು. ಆ ಚಿನ್ನದ ಸರವನ್ನು ಬಿಡಿಸಿಕೊಡುವಂತೆ ಆಗಾಗ ಒತ್ತಡ ಹೇರಿದ್ದರಿಂದ ರೇವತಿಯನ್ನು 2016ರ ಜ. 12ರಂದು ಪಡ್ಲಗುರಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಅಲ್ಲದೆ ಪೊಲೀಸರನ್ನು ಪಡ್ಡಗುರಿಗೆ ಕರೆದುಕೊಂಡು ಹೋಗಿ ರೇವತಿಯ ಶವವನ್ನು ತೋರಿಸಿದ್ದ ಎಂದು ತಿಳಿದು ಬಂದಿದೆ.
ಶೇಕರ್ ಪರ ವಕೀಲರು ರೇವತಿಯ ಡಿಎನ್‌ಎ ಪರೀಕ್ಷೆ ನಡೆಸುವಂತೆ ಕೋರ್ಟಿಗೆ ತಿಳಿಸಿದ್ದರು. ಹಾಗಾಗಿ ಈ ಕುರಿತಂತೆ ವೈದ್ಯಕೀಯ ವರದಿ ನೀಡಿದ್ದ ವೈದ್ಯರನ್ನು ಸಾಕ್ಷಿ ವಿಚಾರಣೆ ನಡೆಸಿದಾಗ, ಶವವು ಸಂಪೂರ್ಣವಾಗಿ ಕೊಳೆತಿದ್ದರಿಂದ ಡಿಎನ್‌ಎ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದರು. ಈ ಪ್ರಕರಣದಲ್ಲಿ ಆರೋಪಿ ಪರ ವಕೀಲರು ವಾದ ಮಂಡಿಸಿ ಡಿಎನ್ಎ ವರದಿಯಲ್ಲಿ ತನಿಖಾಧಿಕಾರಿಯವರು ಕಳುಹಿಸಿಕೊಟ್ಟಿದ್ದ ರೇವತಿಯ ಶವದ ಜೈವಿಕ ಅಂಶಗಳು ಪರೀಕ್ಷೆಗೆ ಸಮರ್ಪಕವಾಗಿರಲಿಲ್ಲ ಎಂದು ವರದಿ ಈಡಿದ್ದರು. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಅವರು ಪ್ರಕರಣವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂಬುದನ್ನು ಗಮನಿಸಿ ಆರೋಪಿಯನ್ನು ಖುಲಾಸೆಗೊಳಿಸಿದ್ದಾರೆ.
ಆರೋಪಿ ಪರವಾಗಿ ವಕೀಲರಾದ ವೇಣುಕುಮಾರ್ ಹಾಗೂ ಯುವರಾಜ್ ಕೆ ಅಮೀನ್ ವಾದ ಮಂಡಿಸಿದ್ದರು.