ಸುರತ್ಕಲ್: ಸುರತ್ಕಲ್ ಕುಲಾಲ ಸಂಘಕ್ಕೆ 75 ವರ್ಷ ಪೂರ್ಣಗೊಂಡಿದ್ದು, ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎ.26ರ ಬೆಳಿಗ್ಗೆ ಶನಿವಾರದಂದು ಬೆಳಿಗ್ಗೆ ಗಣಹೋಮದೊಂದಿಗೆ ಪ್ರಾರಂಭಗೊಂಡು ಸತ್ಯನಾರಾಯಣ ಪೂಜೆ, ಭಜನೆ, ಕುಣಿತ ಭಜನೆ, ಭಕ್ತಿಗಾನ ಸುಧಾ, ಅನ್ನಸಂತರ್ಪಣೆ ವಡೆಯಲಿದೆ. ಅಂದು ಸಂಜೆ 3.00 ಗಂಟೆಗೆ ಉದ್ಘಾಟನಾ ಸಮಾರಂಭವು ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಜರಗಲಿದೆ ಹಾಗೂ ತದನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ ಎಂದು ಸಂಘದ ಅಧ್ಯಕ್ಷ ದಿನಕರ ಅಂಚನ್ ಕಬ್ಬಿನಹಿತ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಜೆ 3.00 ಗಂಟೆಗೆ ಸಮಾರೋಪ ಸಮಾರಂಭವು ಪರಮಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಶ್ರೀಕ್ಷೇತ್ರ ಮಾಣಿಲ ಇವರ ದಿವ್ಯ ಉಪಸ್ಥಿತಿಯಲ್ಲಿ ಈ ಎಲ್ಲ ಕಾರ್ಯಕ್ರಮಗಳು ಜರಗಲಿದ್ದು, ಇದರಲ್ಲಿ ಮುಂಬೈ ಕುಲಾಲ ಸಂಘದ ಪದಾಧಿಕಾರಿಗಳು, ಬೆಂಗಳೂರು ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಗಣ್ಯರು ಮತ್ತು ಸ್ಥಳೀಯ ಎಲ್ಲಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿರುವರು. ಕೊನೆಯದಾಗಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲಾ ಕುಂಭ ಕುಳಾಯಿ ಕುಡ್ಲ ಇವರಿಂದ ʻಪರಮಾತ್ಮೆ ಪಂಜುರ್ಲಿʼ ಎಂಬ ತುಳುನಾಟಕ ಪ್ರದರ್ಶನ ನಡೆಯಲಿದೆ. ಕುಲಾಲ ಸಂಘ ಸುರತ್ಕಲ್ ವತಿಯಿಂದ ಎ.27ರಂದು ಬೆಳಗ್ಗೆ 8.30ಕ್ಕೆ ಚಿತ್ರಕಲಾ ಸ್ಪರ್ಧೆ, 11.00 ಗಂಟೆಗೆ ಮಹಿಳಾ ಸಮಾವೇಶ, ಸನ್ಮಾನ, ಬಹುಮಾನ ವಿತರಣೆ ನಡೆಯಲಿದೆ ಎಂದು ಅವರು ತಿಳಿಸಿದರು.
ಸುರತ್ಕಲ್ ಕುಲಾಲ್ ಸಂಘಕ್ಕೆ 75 ವರ್ಷ
ಸುರತ್ಕಲ್ ಕುಲಾಲ ಸಂಘಕ್ಕೆ 75 ವರ್ಷ ಆಗಿದೆ. ಈ ಸಂಘವನ್ನು ಮುಂಬೈಯಲ್ಲಿ ನೆಲೆಸಿರುವ ಕುಲಾಲ ಬಂಧುಗಳು ಹಾಗೂ ಸಮಾಜದ ಎಲ್ಲಾ ಹಿರಿಯರು ಸೇರಿಕೊಂಡು 1950ರಲ್ಲಿ ಸ್ಥಾಪಿಸಿದರು. ಇದರ ಮೂಲ ಉದ್ದೇಶ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಮಸ್ತಕ ವಿತರಣೆ, ನಿರ್ಗತಿಕರಿಗೆ ಸಹಾಯಹಸ್ತ, ಅಸೌಖ್ಯದಿಂದ ಬಳಲುತ್ತಿರುವವರಿಗೆ ಸಹಾಯಧನ, ಬಡ ಹೆಣ್ಣುಮಕ್ಕಳ ಮದುವೆಗೆ ಸಹಾಯಧನ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಶಾರೀರಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳನ್ನು ಕಳೆದ 75 ವರ್ಷಗಳಿಂದ ನಡೆಸಿಕೊಂಡು ಬಂದಿದೆ.
ಇದೇ ಸಂಘಟನೆಯಿಂದ 1979ರಲ್ಲಿ ಕುಲಾಲ ಭವನವೆಂಬ ಭವ್ಯಸೌಧವನ್ನು ನಿರ್ಮಿಸಿ ಸಾರ್ವಜನಿಕರಿಗೆ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ಕುಲಾಲ ಬಂಧುಗಳು, ಈ ಪೈಕಿ ದಿವಂಗತರುಗಳಾದ ಕೆ.ಎನ್. ಬಂಗೇರ, ಕೆ.ಕೆ. ಬಂಗೇರ, ಮೋನಪ್ಪ ಕೆ.ಸಾಲ್ಯಾನ್, ಜೆ.ಜೆ ಬಂಜನ್, ಹೆಚ್.ಎ. ಸುರತ್ಕಲ್, ಎನ್.ಟಿ. ಸುರತ್ಕಲ್, ಎಸ್. ದಯಾನಂದ, ಎಸ್.ಕೆ. ಗುಜರನ್, ಇವರುಗಳ ಶ್ರಮ ಉಲ್ಲೇಖನೀಯ. ಈ ಸಂಘದ ಬೆಳವಣಿಗೆಯಲ್ಲಿ ಸುರತ್ನಲ್ ಸುಬ್ಬಯ್ಯ ಬಂಗೇರರವರ ಸೇವೆ ಅಪಾರವಾದುದು. ದಿ| ಪರಮೇಶ್ವರ ಬಂಗೇರರವರು ಸುದೀರ್ಘ ಅವಧಿ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದ್ದರು.